ಬಂಟ್ವಾಳ: ಕಳ್ಳಿಗೆ ಗ್ರಾಮದ ದೇವಂದಬೆಟ್ಟು ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ರಾಷ್ಟ್ರಧ್ವಜಕ್ಕೆ ಅವಮಾನವಾಗುವ ರೀತಿ ಭಾಷಣ ಮಾಡಿರುವ ಜತೆಗೆ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಸಮಾಜದ ಶಾಂತಿ ಕದಡಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿ ಬಂಟ್ವಾಳ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಜೋರಾ ಅವರು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಫೆ. 20 ರಂದು ದೇವಂದಬೆಟ್ಟು ದೇವಸ್ಥಾನದ ಬ್ರಹ್ಮಕಲಶದ ಧಾರ್ಮಿಕ ಸಭೆಯಲ್ಲಿ ಡಾ. ಪ್ರಭಾಕರ ಭಟ್ ಅವರು ರಾಷ್ಟ್ರಧ್ವಜದ ಕುರಿತು ಕೀಳಾಗಿ ಮಾತನಾಡಿದ್ದು, ಅಲ್ಲದೆ ಕೋಮು ಪ್ರಚೋದನಕಾರಿಯಾಗಿ ಭಾಷಣ ಮಾಡಿದ್ದಾರೆ. ಪ್ರಸ್ತುತ ಅದರ ವೀಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಮಾಜದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಯಾಗುವ ಆತಂಕ ಎದುರಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.