ರಾಕ್ಷಸೀಯ ಅಟ್ಟಹಾಸಗೈಯ್ಯುತ್ತಿರುವ ರಷ್ಯಾ; ತಾಯ್ನೆಲದ ಉಳಿವಿಗಾಗಿ ಅಂಗಲಾಚುತ್ತಿರುವ ಉಕ್ರೇನ್ ಜನತೆ

Prasthutha|

ಕೀವ್: ರಷ್ಯಾದ ಸೇನಾ ಪಡೆಗಳು ಕ್ಷಿಪಣಿಗಳಿಂದ ಉಕ್ರೇನ್ ನ ಪ್ರಮುಖ ನಗರಗಳನ್ನು ಹೊಡೆದುರುಳಿಸುತ್ತಿರುವಾಗ, ಅಸಹಾಯಕರಾದ  ಅಲ್ಲಿನ ನಾಗರಿಕರ ಹೃದಯಸ್ಪರ್ಶಿ ಕಥೆಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.

- Advertisement -

ಎಲ್ಲೆಡೆ ರಾಷ್ಟ್ರಗೀತೆ ಕೇಳಿಬರುತ್ತಿದೆ. ಕೆಲವರು ಕಹಳೆಯ ಮೂಲಕ ರಾಷ್ಟ್ರಗೀತೆಯನ್ನು ನುಡಿಸುತ್ತಿದ್ದಾರೆ.ದಾಳಿಯಿಂದಾಗಿ ಹಾನಿಗೊಳಗಾಗಿರುವ ವಸತಿ ಕಟ್ಟಡವೊಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಕಿಟಕಿ ಗಾಜಿನ ಚೂರುಗಳನ್ನು ಸ್ವಚ್ಛಗೊಳಿಸುವ ವೇಳೆ ಮಹಿಳೆಯೊಬ್ಬರು ಕಣ್ಣೀರು ಹಾಕುತ್ತಾ ರಾಷ್ಟ್ರಗೀತೆ ಹಾಡುತ್ತಿರುವ ದೃಶ್ಯ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ನೋಡುಗರ ಮನಕಲಕುವಂತಿದೆ.

ತಮ್ಮ ದೇಶದ ಮೇಲೆ ಆಕ್ರಮಣ ಮಾಡಿರುವ ರಷ್ಯಾ ವಿರುದ್ಧ ಉಕ್ರೇನ್ ಸೈನಿಕರು ಹೋರಾಟ ನಡೆಸುತ್ತಿದ್ದರೆ, ಇತ್ತ ನಾಗರಿಕರು ಸಹ ತಮ್ಮದೇ ಆದ ರೀತಿಯಲ್ಲಿ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದಾರೆ. ‘ಉಕ್ರೇನ್‌ಗೆ ಯಶಸ್ಸು ಸಿಗಲಿ’ ಎಂದು ಉಲ್ಲೇಖಿಸಿ ರಾಜತಾಂತ್ರಿಕ ಅಧಿಕಾರಿಯೊಬ್ಬರು ವೀಡಿಯೋ ಸಹ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

- Advertisement -

ಉಕ್ರೇನ್ ಮಹಿಳೆಯೊಬ್ಬರು ರಷ್ಯಾ ಸೈನಿಕರನ್ನು ಪ್ರಶ್ನಿಸುತ್ತಿರುವ ವಿಡಿಯೊವೊಂದು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಆ ಮಹಿಳೆ, ಶಸ್ತ್ರಸಜ್ಜಿತ ರಷ್ಯಾ ಯೋಧರ ಕೈಗೆ ಸೂರ್ಯಕಾಂತಿ ಬೀಜವನ್ನು ಕೊಟ್ಟು ಇದನ್ನು ಜೇಬಿನಲ್ಲಿ ಇಟ್ಟುಕೊಳ್ಳಿ. ನೀವು ಉಕ್ರೇನ್ ನೆಲದಲ್ಲಿ ಸತ್ತ ಬಳಿಕ ಸಸಿಯಾಗಿ ಬೆಳೆಯುತ್ತವೆ ಎಂದು ಹೇಳಿದ್ದರು. ಇದು ಉಕ್ರೇನ್ ದೇಶಪ್ರೇಮಿಗಳ ಹೃದಯ ಗೆದ್ದಿದೆ.



Join Whatsapp