ಉಕ್ರೇನ್‌ನಲ್ಲಿರುವ ಮಗ; ಪುತ್ರನಿಗಾಗಿ ಕಣ್ಣೀರಿಡುತ್ತಿರುವ ತಂದೆ

Prasthutha|

ಕೊಡಗು: ಉಕ್ರೇನ್ ನ ಖಾರ್ಕಿವ್ ನಗರದಲ್ಲಿ ಸಿಲುಕಿರುವ ತಮ್ಮ ಮಗನ ಬಗ್ಗೆ ಚಿಂತಿತರಾಗಿ ತಂದೆಯೊಬ್ಬರು ಕಣ್ಣೀರಿಡುತ್ತಿರುವ ಘಟನೆ ಕೊಡಗಿನ  ಕುಶಾಲನಗರದಿಂದ ವರದಿಯಾಗಿದೆ.

- Advertisement -

ಕೊಡಗಿನ  ಕುಶಾಲನಗರ  ತಾಲ್ಲೂಕಿನ ಕೂಡ್ಲೂರಿನ ಚಂದನ್ ಗೌಡ ಉಕ್ರೇನ್ ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ. ಉಕ್ರೇನ್ ನಲ್ಲಿ  ಬಾಂಬ್ ದಾಳಿ ನಡೆಯುತ್ತಿರುವ ಬಗ್ಗೆ  ಚಂದನ್ ಗೌಡ ಮನೆಯವರಿಗೆ ತಿಳಿಸಿದ್ದ. ಇದೀಗ ಚಿಂತೆಗೀಡಾಗಿರುವ ಆತನ ತಂದೆ ಕೆ.ಕೆ. ಮಂಜುನಾಥ್ “ಉತ್ತಮ ವೈದ್ಯಕೀಯ ಶಿಕ್ಷಣ ಇದೆಯೆಂದು ಉಕ್ರೇನ್ ಗೆ ಕಳುಹಿಸಿದೆವು. ಕಳೆದ ತಿಂಗಳ ಹಿಂದೆಯಷ್ಟೇ ಊರಿಗೆ ಬಂದಿದ್ದ. ಅದಾಗಲೇ ಯುದ್ಧದ ಭೀತಿ ಇತ್ತು. ಆದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅದೆಲ್ಲಾ ಸಾಮಾನ್ಯ. ಆದರೆ ನಾಗರಿಕರಿಗೆ ಯಾವುದೇ ಸಮಸ್ಯೆಯಾಗದು ಎಂಬ ನಂಬಿಕೆಯಿಂದ ಪುನಃ ಕಳುಹಿಸಿದ್ದೆವು. ಈಗ ಭೀಕರ ಯುದ್ಧ ಆರಂಭವಾಗಿದೆ. ಕ್ಷಣ ಕ್ಷಣಕ್ಕೂ ಯುದ್ಧ ತೀವ್ರಗೊಳ್ಳುತ್ತಲೇ ಇದ್ದು ಆತಂಕ ಶುರುವಾಗಿದೆ” ಎಂದು ಮಗನ ಫೋಟೋ  ಹಿಡಿದು ಕಣ್ಣೀರು ಹಾಕುತ್ತಿದ್ದಾರೆ.

ಬೆಕೆಟೋವಾ ಮೆಟ್ರೊ ರೈಲು ನಿಲ್ದಾಣದ ಅಂಡರ್ ಗ್ರೌಂಡ್ ನಲ್ಲಿ ರಕ್ಷಣೆ ಪಡೆದಿದ್ದ ಭಾರತೀಯ ವಿದ್ಯಾರ್ಥಿಗಳು ಶುಕ್ರವಾರ ಬೆಳಿಗ್ಗೆ ಪುನಃ ಅವರವರ ಫ್ಲ್ಯಾಟ್ ಗಳಿಗೆ ತೆರಳಿದ್ದಾರೆ. ಆದರೆ ಅಲ್ಲಿಯೂ ಎಲ್ಲರೂ ನೆಮ್ಮದಿಯಾಗಿ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ. ಒಂದು ಫ್ಲ್ಯಾಟ್ ನಲ್ಲಿರುವ ಎಲ್ಲರೂ ನಿದ್ದೆ ಮಾಡಿದರೆ ಇಬ್ಬರು ಎಚ್ಚರದಿಂದ ಇದ್ದು, ಯಾವ ಕ್ಷಣದಲ್ಲಿ ಏನು ದುರಂತ ನಡೆಯುವುದೋ ಎಂದು ನಿದ್ದೆಬಿಟ್ಟು ಕಾದು ಕುಳಿತುಕೊಳ್ಳಬೇಕಾಗಿದೆ ಎಂದು ಮಗನ ಸ್ಥಿತಿಯನ್ನು ನೆನೆದು ಅತ್ತುಬಿಟ್ಟರು.

- Advertisement -

ಆದರೆ ಇಷ್ಟೆಲ್ಲಾ ಆಗುತ್ತಿದ್ದರೂ ಈವರೆಗೆ  ಜಿಲ್ಲಾಡಳಿತವಾಗಲೀ ಅಥವಾ ಸರ್ಕಾರದ ಯಾವ ಅಧಿಕಾರಿಗಳಾಗಲೀ ನಮ್ಮನ್ನು ಸಂಪರ್ಕಿಸಿ ನಮ್ಮ ಅಳಲು ಆಲಿಸಿ, ಸಾಂತ್ವನ ಹೇಳುವ ಕೆಲಸ ಮಾಡಿಲ್ಲ . ಅವರಿಗೆ ತೊಂದರೆಯಾದರೆ ಮಾತ್ರ ನೋವು ಎನ್ನುವ ರೀತಿ ಅಧಿಕಾರಿಗಳು ವರ್ತಿಸುತ್ತಿರುವುದು ಎಷ್ಟು ಮಟ್ಟಿಗೆ ಸರಿ ಎಂದು ಮಂಜುನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಉಕ್ರೇನ್‌ನಲ್ಲಿ ಕ್ಷಣ-ಕ್ಷಣಕ್ಕೂ ಆತಂಕ ಜಾಸ್ತಿಯಾಗುತ್ತಲೇ ಇದ್ದು ಅಲ್ಲಿ ಸಿಲುಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳೆಲ್ಲ ಭಯದಿಂದಲೇ ದಿನ ದೂಡುತ್ತಿದ್ದಾರೆ. ಇತ್ತ  ಅವರ ಹೆತ್ತವರೂ ಕೂಡ ಆತಂಕದಲ್ಲಿದ್ದಾರೆ.



Join Whatsapp