ಇದು ಯಾವ ರೀತಿಯ ತನಿಖೆ । ಫೈಝಾನ್ ಸಾವಿನ ತನಿಖೆಯ ಬಗ್ಗೆ ದೆಹಲಿ ಪೊಲೀಸರನ್ನು ತರಾಟೆಗೆ ತೆಗೆದ ಹೈಕೋರ್ಟ್

Prasthutha|

ನವದೆಹಲಿ: 2020 ರಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಮುಸ್ಲಿಮ್ ವಿರೋಧಿ ಹತ್ಯಾಕಾಂಡದ ಸಂದರ್ಭದಲ್ಲಿ 23 ವರ್ಷದ ಮುಸ್ಲಿಮ್ ಯುವಕ ಫೈಝಾನ್ ಸಾವಿನ ತನಿಖೆಯ ಕುರಿತು ದೆಹಲಿ ಪೊಲೀಸರನ್ನು ಹೈಕೋರ್ಟ್ ತರಾಟೆಗೆ ತೆಗೆದಿದ್ದು, ತನಿಖೆಯಲ್ಲಿನ ಪ್ರಗತಿಯ ಕುರಿತು ವರದಿ ಒಪ್ಪಿಸುವಂತೆ ಸೂಚಿಸಿದೆ.

- Advertisement -

ಫೆಬ್ರವರಿ 24,2020 ರಂದು ಚಿತ್ರೀಕರಿಸಲಾದ ವೀಡಿಯೋದಲ್ಲಿ ಪೊಲೀಸರು ಫೈಝಾನ್ ಎಂಬಾತನನ್ನು ಮತ್ತು ಇತರ ನಾಲ್ವರು ಮುಸ್ಲಿಮ್ ಯುವಕರನ್ನು ಥಳಿಸುತ್ತಿರುವುದು ಸೆರೆಯಾಗಿದೆ. ಈ ಸಂದರ್ಭದಲ್ಲಿ ವಂದೇ ಮಾತರಂ ಮತ್ತು ರಾಷ್ಟ್ರಗೀತೆ ಪಠಿಸುವಂತೆ ಬಲವಂತಪಡಿಸಲಾಗಿತ್ತು. ಈ ಮಧ್ಯೆ ಫೈಝಾನ್ ಎಂಬಾತನನ್ನು ಜ್ಯೋತಿ ನಗರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದರು. ಅಲ್ಲಿ ಆತನಿಗೆ ವ್ಯಾಪಕ ಚಿತ್ರಹಿಂಸೆ ನೀಡಲಾಗಿತ್ತು. ಜೈಲಿನಿಂದ ಬಿಡುಗಡಯಾದ ಫೈಝಾನ್ ಸಾವನ್ನಪ್ಪಿದ್ದರು. ಈ ಹಿಂದೆ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯು ಪಾರದರ್ಶಕವಾಗಿಲ್ಲ ಎಂದು ಹೈಕೋರ್ಟ್ ನ್ಯಾಯಮೂರ್ತಿ ಮುಕ್ತಾ ಗುಪ್ತಾ ತಿಳಿಸಿರುವ ಮಾಧ್ಯಮಗಳು ವರದಿ ಮಾಡಿವೆ.

ಈ ಮಧ್ಯೆ ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸುವಂತೆ ಕೋರಿ ಫೈಝಾನ್ ತಾಯಿ ಕಿಸ್ಮಾತುನ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಪೊಲೀಸರು ತನ್ನ ಮಗನನ್ನು ಕಾನೂನುಬಾಹಿರವಾಗಿ ಬಂಧಿಸಿದ್ದಾರೆ ಮತ್ತು ಚಿಕಿತ್ಸೆಯನ್ನು ನಿರಾಕರಿಸಿದ್ದಾರೆ ಎಂದು ಆರೋಪಿಸಿದ್ದಾರೆ.

- Advertisement -

ಫೈಝಾನ್ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಆತನ ದೇಹದಲ್ಲಿದ್ದ 20 ಕ್ಕೂ ಅಧಿಕ ಗಾಯಗಳಾಗಿರುವ ಬಗ್ಗೆ ಯಾಕೆ ಉಲ್ಲೇಖಿಸಿದೆ ಎಂದು ನ್ಯಾಯಮೂರ್ತಿ ಗುಪ್ತಾ ಅವರು ದೆಹಲಿ ಪೊಲೀಸರನ್ನು ಪ್ರಶ್ನಿಸಿದರು. ಪೊಲೀಸ್ ಕಸ್ಟಡಿಯಲ್ಲಿದ ಸಂದರ್ಭದಲ್ಲಿ ಆತನನ್ನು ಪರೀಕ್ಷಿಸಿದ ವೈದ್ಯರ ವರದಿಯಲ್ಲಿ ಕೇವಲ ಮೂರು ಗಾಯಗಳನ್ನು ಮಾತ್ರ ಗುರುತಿಸಿತ್ತು. ಥಳಿತಕ್ಕೊಳಗಾದ ಮತ್ತು ಸಾಕ್ಷಿಗಳಾಗಿರುವ ಇತರ ನಾಲ್ವರ ಹೇಳಿಕೆಗಳನ್ನು ಪೊಲೀಸರು ಏಕೆ ದಾಖಲಿಸಿಲ್ಲ ಎಂದು ನ್ಯಾಯಾಲಯ ಪ್ರಶ್ನಿಸಿದೆ.



Join Whatsapp