ಕೊಚ್ಚಿ: ಮಲಯಾಳಂ ಚಲನಚಿತ್ರ ರಂಗದ ಅವಿಭಾಜ್ಯ ಅಂಗವಾಗಿದ್ದ ಹಿರಿಯ ನಟಿ KPSC ಲಲಿತಾ [74] ಮಂಗಳವಾರ ರಾತ್ರಿ ಸ್ವ ಗೃಹದಲ್ಲಿ ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ನಟಿ ಲಲಿತಾರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತಾದರೂ, ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಮರಳಿ ಮನೆಗೆ ಕರೆತರಲಾಗಿತ್ತು. ತ್ರಿಪುಣಿತ್ತರದ ಮಗನ ಮನೆಯಲ್ಲಿ ಬುಧವಾರವಬೆಳಗ್ಗೆ 8 ಗಂಟೆಯಿಂದ ಮೃತದೇಹವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು.
ವಡಕ್ಕಾನ್’ಚೇರಿಯಲ್ಲಿರುವ ಲಲಿತಾ ಅವರ ಮನೆಯ ಸಮಿಪದಲ್ಲೇ ಸಂಜೆ ಅಂತಿಮ ಕ್ರಿಯೆಗಳು ನಡೆಯಲಿದೆ. ಫೆಬ್ರವರಿ 25, 1947 ರಂದು ಅಲಪ್ಪುಝ ಜಿಲ್ಲೆಯ ಕಾಯಂಕುಳಂ ಬಳಿಯ ರಾಮಪುರಂನಲ್ಲಿ ಜನಿಸಿದ ಲಲಿತಾ, ರಂಗಭೂಮಿ ಕಲಾವಿದೆಯಾಗಿ ನಟನಾ ವೃತ್ತಿಯನ್ನು ಆರಂಭಿಸಿ ಬಳಿಕ ಮಲಯಾಳಂ ಚಲನಚಿತ್ರದ ಅವಿಭಾಜ್ಯ ಅಂಗವಾಗಿದ್ದರು.
550 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದ ಲಲಿತಾ, ಅತ್ಯುತ್ತಮ ಪೋಷಕ ನಟಿ ವಿಭಾಗದಲ್ಲಿ ಎರಡು ಬಾರಿ ರಾಷ್ಟ್ರೀಯ ಪ್ರಶಸ್ತಿ ಹಾಗೂ ನಾಲ್ಕು ಬಾರಿ ರಾಜ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.