ಮಂಗಳೂರು: ಪ್ರಸ್ತುತ ಪಾಕ್ಷಿಕದ ಪ್ರಥಮ ಸಂಪಾದಕರಾಗಿದ್ದ ದಿವಂಗತ ಕೆ.ಎಂ.ಶರೀಫ್ ಅವರ ಸ್ಮರಣಾರ್ಥ ‘ಪ್ರಸ್ತುತ’ ಪಾಕ್ಷಿಕದ ವತಿಯಿಂದ ನೀಡಲಾಗುವ “ಕೆ.ಎಂ.ಶರೀಫ್ ಸ್ಮಾರಕ ಪ್ರಶಸ್ತಿ-2021” ಅನ್ನು ಹಿರಿಯ ಚಿಂತಕ ಜಿ.ರಾಜಶೇಖರ್ ಅವರಿಗೆ ಮಂಗಳೂರಿನ ಶಾಂತಿನಿಲಯದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು.
ಪ್ರಸ್ತುತ ಪಾಕ್ಷಿಕದ ಪ್ರಧಾನ ಸಂಪಾದಕ ಅಬ್ದುಲ್ ರಝಾಕ್ ಕೆಮ್ಮಾರ ಅವರು ಜಿ.ರಾಜಶೇಖರ್ ಅವರಿಗೆ ಶಾಲು ಹೊದಿಸಿ, ಪ್ರಶಸ್ತಿ ಪತ್ರ, ಫಲಕ ನೀಡಿ ಸನ್ಮಾನಿಸಿದರು.
ಈ ವೇಳೆ ಸಾಮಾಜಿಕ ಹೋರಾಟಗಾರ್ತಿ, ಮಾಜಿ ಸಚಿವೆ ಬಿ. ಟಿ. ಲಲಿತಾ ನಾಯಕ್, ದ್ರಾವಿಡ ಚಳವಳಿ ಹೋರಾಟಗಾರ ಅಭಿ ಗೌಡ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯಾಧ್ಯಕ್ಷ ಯಾಸಿರ್ ಹಸನ್, ನಿವೃತ್ತ ಪ್ರಾಧ್ಯಾಪಕ ಪಟ್ಟಾಭಿರಾಮ ಸೋಮಯಾಜಿ, ಪ್ರಸ್ತುತ ಪಾಕ್ಷಿಕದ ಸಂಪಾದಕೀಯ ಮಂಡಳಿ ಸದಸ್ಯರಾದ ಇಲ್ಯಾಸ್ ಮುಹಮ್ಮದ್ ತುಂಬೆ, ಶಾಹಿದಾ ಅಸ್ಲಂ ಮತ್ತಿತರರು ಉಪಸ್ಥಿತರಿದ್ದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿ.ರಾಜಶೇಖರ್, ತಮ್ಮನ್ನು ಗುರುತಿಸಿ ಪ್ರಶಸ್ತಿ ನೀಡಿರುವುದಕ್ಕೆ ಕೃತಜ್ಞತೆಗಳು. ಈ ಪ್ರಶಸ್ತಿಯನ್ನು ನಾನು ಹೃತ್ಪೂರ್ವಕವಾಗಿ ಸ್ವೀಕರಿಸಿದ್ದೇನೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಮಾತನಾಡಿ, ಯಾವುದನ್ನು ತಿನ್ನಬೇಕು, ಯಾವ ವಸ್ತ್ರ ಧರಿಸಬೇಕು ಎಂದು ನಿರ್ಧರಿಸುವ ಹಕ್ಕನ್ನು ಪ್ರತಿಯೊಬ್ಬರೂ ಹೊಂದಿದ್ದಾರೆ. ಬದುಕುವ, ಆಲೋಚಿಸುವ ಹಕ್ಕನ್ನು ಸಂವಿಧಾನ ನಮಗೆ ನೀಡಿದೆ. ಆದರೆ ಇಂದು ಈ ಹಕ್ಕನ್ನು ಕಸಿಯುವ ಪ್ರವೃತ್ತಿ ನಡೆಯುತ್ತಿದೆ. ಧರ್ಮದ ಅಮಲು ಎಷ್ಟು ಹೆಚ್ಚಾಗಿದೆ ಅಂದರೆ ಅವರಿಗೆ ತಾವು ಏನು ಮಾಡುತ್ತಿದ್ದೇವೆ ಎಂಬುದರ ಪರಿವೇ ಇಲ್ಲ ಎಂದರು.
ಗೋ ಹತ್ಯೆ ಮಸೂದೆ ಬಂದಾಗಲೇ, ಮುಸ್ಲಿಮರು, ದಲಿತರು ಸೇರಿದಂತೆ ಎಲ್ಲಾ ಸಮುದಾಯದವರು ದಂಗೆ ಏಳಬೇಕಾಗಿತ್ತು. ಆದರೆ ನಾವು ಮೌನವಾದೆವು. ಇನ್ನು ಮುಂದಾದರೂ ಎಲ್ಲರೂ ಒಗ್ಗಟ್ಟಾಗಿ ದೇಶವನ್ನು ಸರಿಯಾದ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಬೇಕು ಎಂದು ಕರೆ ನೀಡಿದರು.
ಕೆ.ಎಂ.ಶರೀಫ್ ಅವರಂತಹ ಮೇರು ವ್ಯಕ್ತಿತ್ವದ ಹೆಸರಿನಲ್ಲಿ ನೀಡುತ್ತಿರುವ ಪ್ರಥಮ ಪ್ರಶಸ್ತಿಗೆ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಿ ಪ್ರಶಸ್ತಿ ಪ್ರದಾನ ಮಾಡಿರುವುದಕ್ಕೆ ಪ್ರಸ್ತುತ ಬಳಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಪಾಪ್ಯುಲರ್ ಪ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ಮಾತನಾಡಿ, ಜಿ.ರಾಜಶೇಖರ್ ಅವರು ಜೀವನದುದ್ದಕ್ಕೂ ಪ್ರಾಮಾಣಿಕವಾಗಿ ಹೋರಾಟ ಮಾಡಿಕೊಂಡು ಬಂದವರು. ಇದರೊಂದಿಗೆ ಬರವಣಿಗೆ ಮತ್ತು ಬೀದಿಯಲ್ಲೂ ಹೋರಾಟ ಮಾಡಿದ ಮೇರು ವ್ಯಕ್ತಿತ್ವವಾಗಿದ್ದಾರೆ. ಅವರನ್ನು ಗುರುತಿಸಿ ಪ್ರಶಸ್ತಿ ಕೊಟ್ಟಿರುವುದರಿಂದ ಪ್ರಶಸ್ತಿಯ ಗೌರವವೂ ಹೆಚ್ಚಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಸ್ತುತ ಪಾಕ್ಷಿಕದ ಪ್ರಧಾನ ಸಂಪಾದಕ ಅಬ್ದುಲ್ ರಝಾಕ್ ಕೆಮ್ಮಾರ ಮಾತನಾಡಿ, ದೇಶದ ಜನರ ಹಕ್ಕುಗಳನ್ನು ಕಸಿಯುತ್ತಿರುವ ಈ ಸಂದರ್ಭದಲ್ಲಿ ಅವುಗಳನ್ನು ಪ್ರಶ್ನಿಸಲು ಧೈರ್ಯ ತೋರಬೇಕು. ಮಾನವ ವಿರೋಧಿ ಶಕ್ತಿಯ ವಿರುದ್ಧ ಕೆಚ್ಚೆದೆಯ ಹೋರಾಟ ಮಾಡಿದರೆ ಮಾತ್ರ ವಿಜಯ ಸಾಧ್ಯ. ಪವಿತ್ರ ಕುರ್ ಆನ್ ಕೂಡ ಸತ್ಯವಿಶ್ವಾಸಿಗಳು ಭಯಪಡದಂತೆ ತಾಕೀತು ಮಾಡಿದೆ ಎಂದರು.
ಇದಕ್ಕೂ ಮೊದಲು ನಡೆದ “ಅಭಿವ್ಯಕ್ತಿ ಸ್ವಾತಂತ್ರ್ಯ: ಫ್ಯಾಶಿಸಂ ಒಡ್ಡುತ್ತಿರುವ ಸವಾಲುಗಳು” ಕುರಿತ ವಿಚಾರ ಸಂಕಿರಣದಲ್ಲಿ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಪಟ್ಟಾಭಿರಾಮ ಸೋಮಯಾಜಿ ಮಾತನಾಡಿ, ದೇಶದಲ್ಲಿ ಪ್ರಜಾಪ್ರಭುತ್ವ ಸತ್ತು ಹೋಗಿದೆ. ಆದರೆ ಅದು ಚಿರಾಯುವಾಗಲಿ ಎಂದು ಘೋಷಣೆ ಮಾಡಬೇಕಾದ ಪರಿಸ್ಥಿತಿ ಇದೆ. ದೇಶದಲ್ಲಿ ಬಹುಸಂಖ್ಯಾತರ ಕೋಮುವಾದ ಅತ್ಯಂತ ಅಪಾಯಕಾರಿ ಎಂದು ಪ್ರಥಮ ಪ್ರಧಾನಿ ನೆಹರೂ ಹೆಳಿದ್ದರು. ಮಾಧ್ಯಮಗಳು ಸಂಪೂರ್ಣವಾಗಿ ಕೋಮು ವಾದಕ್ಕೆ ತಿರುಗಿದೆ. ಬಿಜೆಪಿಯವರು ಯುವಕರಿಗೆ ಉದ್ಯೋಗ ಕೊಡುವ ಬದಲು ಹೊಡಿ ಬಡಿ ಕೆಲಸ ನೀಡಿದೆ ಎಂದು ಹೇಳಿದರು.
ಪ್ರಸ್ತುತ ಸಂಪಾದಕೀಯ ಮಂಡಳಿ ಸದಸ್ಯೆ ಶಾಹಿದಾ ಅಸ್ಲಂ ಮಾತನಾಡಿ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಪ್ರಧಾನಿಯವರ ಭೇಟಿ ಬಚಾವೋ ಭೇಟಿ ಪಡಾವೊ ಯಾರಿಗೂ ಒದಗದ ಒಣ ಮಾತಾಗಿದೆ. ಫ್ಯಾಶಿಸ್ಟರು ಅಂತರಜಾಲವನ್ನು ಕೂಡ ದಮನಿಸುವ ನೀತಿಯನ್ನೂ ಅನುಸರಿಸುತ್ತಿದ್ದಾರೆ ಎಂದರೆ ಉಸಿರು ಕಟ್ಟುವಿಕೆ ಸಾರ್ವತ್ರಿಕ ಆಗಿದೆ ಎಂದು ತಿಳಿಸಿದರು.
ದ್ರಾವಿಡ ಚಳವಳಿ ಹೋರಾಟಗಾರ ಮತ್ತು ಚಿತ್ರ ನಿರ್ದೇಶಕ ಅಭಿ ಗೌಡ ಮಾತನಾಡಿ, ನುಡಿ ವ್ಯವಸ್ಥೆ ಹೆಣ್ಣು ಮಕ್ಕಳು ಕಂಡು ಹಿಡಿದ ವ್ಯವಸ್ಥೆ, ಆದ್ದರಿಂದ ತಾಯಿ ನುಡಿ, ಮದರ್ ಟಂಗ್ ಎನ್ನುತ್ತಾರೆಯೇ ಹೊರತು ಫಾದರ್ ನುಡಿ ಎನ್ನುವುದಿಲ್ಲ. ನಮ್ಮ ಪ್ರಜಾಪ್ರಭುತ್ವದ ಚರಿತ್ರೆ ಬಿಟ್ಟು ರಾಜ ಪ್ರಭುತ್ವದ ಚರಿತ್ರೆ ಕಲಿಸುತ್ತಾರೆ. ಕರ್ನಾಟಕದಲ್ಲಿ ಟಿಪ್ಪು ಸುಲ್ತಾನ್ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಮಾತ್ರ ಜನಪರ ಆಡಳಿತ ನೀಡಿದವರು. ಆದರೆ ಈಗ ಪ್ರಜಾಪ್ರಭುತ್ವದ ನಡುವೆ ಫ್ಯಾಶಿಸಂ ಇಣುಕುತ್ತಿದೆ. ಇದು ಧರ್ಮ ಪಾತಕ ಎಂದು ಹೇಳಿದರು.
ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದ ಪ್ರಸ್ತುತ ಸಂಪಾದಕೀಯ ಮಂಡಳಿ ಸದಸ್ಯ ಇಲ್ಯಾಸ್ ಮುಹಮ್ಮದ್ ತುಂಬೆ, ನಾವು ಸಣ್ಣವರಿದ್ದಾಗ ಶಾಲೆಯಿಂದ ಜಾತ್ರೆಯವರೆಗೆ ಹಿಂದೂ ಮುಸ್ಲಿಮರು ಒಟ್ಟಾಗಿ ಪಾಲ್ಗೊಳ್ಳುತ್ತಿದ್ದೆವು. ಒಟ್ಟಾಗಿ ಆನಂದಿಸುತ್ತಿದ್ದೆವು. ಇಂದು ಫ್ಯಾಶಿಸ್ಟರು ಇಂತಹ ಅವಕಾಶಗಳನ್ನು ಇಲ್ಲದಂತೆ ಮಾಡಿದ್ದಾರೆ. ಸುಳ್ಳು ಮೇವ ಜಯತೆ ಆರಾಧಕರು ಫ್ಯಾಶಿಸಂ ಮೂಲಕ ದೇಶದ ಸೌಹಾರ್ದವನ್ನು ಪೂರ್ಣ ನೆಲ ಕಚ್ಚುವಂತೆ ಮಾಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೆ.ಎಂ.ಶರೀಫ್ ಅವರ ಬದುಕು ಮತ್ತು ಹೋರಾಟದ ಕುರಿತ ವೀಡಿಯೋ ಪ್ರದರ್ಶನ ನಡೆಯಿತು.