ರಾಷ್ಟ್ರದ್ರೋಹಿಯನ್ನು ಸಚಿವರನ್ನಾಗಿ ಇಟ್ಟುಕೊಂಡಿರುವುದರಿಂದ ಯುವಕನ ಹತ್ಯೆಯಾಗಿದೆ: ಡಿಕೆಶಿ

Prasthutha|

ಬೆಂಗಳೂರು: ಶಿವಮೊಗ್ಗದಲ್ಲಿ ಹತ್ಯೆಯಾದ ಯುವಕನ ಮೃತದೇಹದ ಮೆರವಣಿಗೆ ವೇಳೆ ಗಲಭೆ ಉಂಟಾಗಲು ಸಚಿವ ಈಶ್ವರಪ್ಪ ಕಾರಣ ಎಂದು ದೂರಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಸರ್ಕಾರ ಮತ್ತು ಪೋಲಿಸರ ವಿರುದ್ದ ಹರಿಹಾಯ್ದಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ “ಒಬ್ಬ ಮಂತ್ರಿ ಸೆಕ್ಷನ್ 144 ಉಲ್ಲಂಘನೆ ಮಾಡಿದರೂ ಯಾಕೆ ಕೇಸ್ ಹಾಕಿಲ್ಲ? ಆತನೇ ನಿಂತುಕೊಂಡು ಮೆರವಣಿಗೆ ಮಾಡಿಸಿ ಕಲ್ಲು ಹೊಡೆಸಿದರೂ ಯಾಕೆ ಪ್ರಕರಣ ದಾಖಲಿಸಿಲ್ಲ? ಖಾಕಿ ಧರಿಸಿರುವವರು ಇದಕ್ಕೆ ಉತ್ತರಿಸಬೇಕು ಇಲ್ಲ, ಖಾಕಿ ಕಳಚಿ ಕೇಸರಿ ಹಾಕಲಿ. ಇಂತಹ ರಾಷ್ಟ್ರದ್ರೋಹಿಯನ್ನು ಸಚಿವರನ್ನಾಗಿ ಇಟ್ಟುಕೊಂಡಿರುವುದರಿಂದ ಯುವಕನ ಹತ್ಯೆಯಾಗಿದೆ. ನನ್ನಿಂದ ಪ್ರಚೋದನೆಯಾಗಿದ್ದರೆಂದು ಹೇಳಿದರು, ಹಾಗಿದರೆ ನನ್ನನ್ನು ಬಂಧಿಸಲಿ. ಹೊರಗಿನವರ ಸಂಚಿದೆ, ವಿದೇಶದಿಂದ ಬಂದಿದ್ದಾರೆ ಎಂದೂ ಈಶ್ವರಪ್ಪ ದೂರಿದ್ದಾರೆ. ಎನ್ ಐಎ ತನಿಖೆಯಾಗಬೇಕೆಂದು ಹೇಳಿದ್ದಾರೆ, ಹಾಗಾದರೆ ಸಚಿವರಿಗೆ ಪೋಲಿಸರ ಮೇಲೆ ನಂಬಿಕೆ ಇಲ್ವೇ..? ಗೃಹ ಸಚಿವ, ಜಿಲ್ಲಾ ಉಸ್ತುವಾರಿ ಸಚಿವರು ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡಿದ್ದಾರೆ. ಈಶ್ವರಪ್ಪ ಜಿಲ್ಲೆಯ ನಾಗರಿಕರನ್ನು ಬದುಕಿರುವಾಗಲೇ ಸಾಯಿಸುತ್ತಿದ್ದಾರೆ. ತನಿಖೆಯಾಗಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ” ಎಂದು ವಾಗ್ದಾಳಿ ನಡೆಸಿದರು.

ಕಳೆದ ಐದು ದಿನಗಳಿಂದ ನಮ್ಮೆಲ್ಲ ಶಾಸಕರು ಅಹೋರಾತ್ರಿ ಧರಣಿ ಮಾಡುತ್ತಿದ್ದಾರೆ. 24 ಪರಿಷತ್ ಸದಸ್ಯರು, 52 ಜನ ಶಾಸಕರು ಸದನದಲ್ಲಿ ಮಲಗಿದ್ದೇವೆ, ಧರಣಿ ನಡೆಸಿದ್ದೇವೆ. ಇಂದು ಕೂಡ ಮುಂದುವರಿಸುತ್ತೇವೆ. ಆಂತರಿಕವಾಗಿ ಸದನ ಮೊಟಕು ಮಾಡುತ್ತಾರೆಂದು ತಿಳಿದು ಬಂದಿದೆ. ಅಧಿವೇಶನ ಮೊಟಕು ಮಾಡಿದರೆ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಮಾಡುತ್ತೇವೆ ಎಂದು ಡಿ ಕೆ ಶಿ ಹೇಳಿದರು.



Join Whatsapp