ಬೆಂಗಳೂರು: ಶಿವಮೊಗ್ಗದ ಸಂಘಪರಿವಾರದ ಕಾರ್ಯಕರ್ತ ಹರ್ಷನ ಹತ್ಯೆ ಅಮಾನುಷ ಮತ್ತು ಭೀಕರ. ಗೃಹ ಸಚಿವ, ಗ್ರಾಮೀಣಾಭಿವೃದ್ದಿ ಸಚಿವ ಮತ್ತು ಮಾಜಿ ಮುಖ್ಯಮಂತ್ರಿ ತವರಿನಲ್ಲೇ ಈ ಕೃತ್ಯ ನಡೆದಿರುವುದು ಸರ್ಕಾರ ಅಸಮರ್ಥನೆಯನ್ನು ಎತ್ತಿ ತೋರಿಸುತ್ತದೆ. ಇದನ್ನು ಮುಂದಿಟ್ಟುಕೊಂಡು ಸಚಿವ ಈಶ್ವರಪ್ಪ ಹೆಣದ ಮೇಲೆ ರಾಜಕೀಯ ಮಾಡುವುದನ್ನು ನಿಲ್ಲಿಸಲಿ ಎಂದು ಶಾಸಕ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.
ಶಿವಮೊಗ್ಗದ ಘಟನೆಯ ಕುರಿತು ಸರಣಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಅವರು, ‘ಶಿವಮೊಗ್ಗದ ಯುವಕ ಹರ್ಷನ ಹತ್ಯೆ ಅಮಾನುಷ ಮತ್ತು ಭೀಕರ. ಗೃಹ ಸಚಿವ, ಗ್ರಾಮೀಣಾಭಿವೃದ್ದಿ ಸಚಿವ ಮತ್ತು ಮಾಜಿ ಮುಖ್ಯಮಂತ್ರಿ ತವರಿನಲ್ಲೇ ಈ ಕೃತ್ಯ ನಡೆದಿರುವುದು ಸರ್ಕಾರದ ಅಸಮರ್ಥನೆಯನ್ನು ಎತ್ತಿ ತೋರಿಸಿದೆ. ಹರ್ಷನ ಹತ್ಯೆ ಮಾಡಿದ ಆರೋಪಿಗಳು ಯಾವುದೇ ಸಮುದಾಯಕ್ಕೆ ಸೇರಿದ್ದರೂ ಯಾವುದೇ ಸಂಘಟನೆಗೆ ಸೇರಿದ್ದರೂ ಅವರ ವಿರುದ್ಧ ಉಗ್ರ ಕ್ರಮ ತೆಗೆದುಕೊಳ್ಳಬೇಕು. ಈ ವಿಚಾರದಲ್ಲಿ ರಾಜಕೀಯ ಅನಗತ್ಯ ಎಂದು ತಿಳಿಸಿದ್ದರು.
ಮತ್ತೊಂದು ಟ್ವೀಟ್ ನಲ್ಲಿ ಸಚಿವ ಈಶ್ವರಪ್ಪ ಹೆಣದ ಮೇಲೆ ರಾಜಕೀಯ ಮಾಡುವುದನ್ನು ನಿಲ್ಲಿಸಲಿ. ಹೆಣದ ಮೇಲೆ ರಾಜಕೀಯ ಮಾಡುವುದು ಬಿಜೆಪಿಯವರ ಕೆಟ್ಟ ಚಾಳಿ. ರಾಜ್ಯದಲ್ಲಿ ಇವರದ್ದೇ ಸರ್ಕಾರವಿದೆ. ಗೃಹಸಚಿವರು ಕೂಡ ಈಶ್ವರಪ್ಪನ ಜಿಲ್ಲೆಯವರೆ, ಹೀಗಿದ್ದರೂ ಈಶ್ವರಪ್ಪ ಕಂಡವರನ್ನು ದೂರುವುದ್ಯಾಕೆ? ಎಂದು ಪ್ರಶ್ನಿಸಿದ್ದಾರೆ.
ಇನ್ನೊಂದು ಟ್ವೀಟ್ ನಲ್ಲಿ ‘ಹರ್ಷನ ಹತ್ಯೆ ಆರೋಪಿಗಳನ್ನು ಪೊಲೀಸರು ಶೀಘ್ರವೇ ಬಂಧಿಸಲಿ. ಆರೋಪಿಗಳು ಯಾರೇ ಆಗಿದ್ದರೂ ಅವರಿಗೆ ಕಿಂಚಿತ್ತೂ ದಯೆ ತೋರಬಾರದು. ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಸರ್ಕಾರದ ಮೇಲಿದೆ. ಶಿವಮೊಗ್ಗದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮ ವಹಿಸಲಿ ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.