ಹರ್ಷ ಕೊಲೆ ಪ್ರಕರಣ: ಯಾವುದೇ ಸಂಘಟನೆ ಕೈವಾಡ ಇಲ್ಲ- ಆರಗ ಜ್ಞಾನೇಂದ್ರ

Prasthutha|

ತೀರ್ಥಹಳ್ಳಿ: ಬಜರಂಗದಳದ ಸದಸ್ಯ ಹರ್ಷನ ಹತ್ಯೆಯ ಹಿಂದೆ ಯಾವುದೇ ಸಂಘಟನೆ ಇರುವ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.

- Advertisement -

ಘಟನೆಯ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬಜರಂಗದಳ ಸದಸ್ಯ ಕಾರ್ಯಕರ್ತನ ಹತ್ಯೆಯ ಬಳಿಕ ಶಿವಮೊಗ್ಗದಲ್ಲಿ ಪರಿಸ್ಥಿತಿ ಬಿಗಡಾಯಿಸಿದ್ದು, ನಗರದ ವಿವಿಧೆಡೆ ಹಿಂಸಾಚಾರ ವರದಿಯಾಗಿದೆ ಎಂದು ತಿಳಿಸಿದ್ದಾರೆ.


‘ಈ ಕೊಲೆಯ ಹಿಂದೆ ಸಂಘಟನೆಗಳ ಕೈವಾಡವೇನಾದರೂ ಇದೆಯೇ? ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಈ ಬಗ್ಗೆ ನನಗೆ ಯಾವುದೇ ಮಾಹಿತಿ ಲಭಿಸಿಲ್ಲ. ಕೃತ್ಯದಲ್ಲಿ ನಾಲ್ಕೈದು ಯುವಕರ ಗುಂಪು ಭಾಗಿಯಾಗಿದೆ ಎಂಬ ಮಾಹಿತಿ ಸಿಕ್ಕಿದೆ ಎಂದು ತಿಳಿಸಿದ್ದಾರೆ.

- Advertisement -

ಸದ್ಯ ಪರಿಸ್ಥಿತಿ ಹತೋಟಿಯಲ್ಲಿದ್ದು, ಜಿಲ್ಲಾಧಿಕಾರಿಯವರ ಆದೇಶದ ಅನ್ವಯ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ ಎಂದು ತಿಳಿಸಿದ ಅವರು, ಈ ಹತ್ಯೆಗೂ ಹಿಜಾಬ್ ಪ್ರತಿಭಟನೆಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ. ಆರೋಪಿಗಳ ಬಂಧನದ ಬಳಿಕ ಸತ್ಯಾಸತ್ಯತೆ ಬಹಿರಂಗವಾಗಲಿದೆ ಎಂದು ತಿಳಿಸಿದರು.

ಶಿವಮೊಗ್ಗದಲ್ಲಿ ಶಾಂತಿಯನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಸೆಕ್ಷನ್ 144 ಅನ್ನು ಜಾರಿಗೊಳಿಸಲಾಗಿದೆ. ಪರಿಸ್ಥಿತಿ ಹತೋಟಿಯಲ್ಲಿದ್ದರೂ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಮತ್ತು ಆರ್.ಎ.ಎಫ್ ಪಡೆಯನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಫೆಬ್ರವರಿ 7ರಂದು ಶಿವಮೊಗ್ಗದ ಕಾಲೇಜಿನ ಹೊರಗೆ ಹಿಜಾಬ್ಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಹರ್ಷ ಭಾಗವಹಿಸಿದ್ದನು ಎಂದು ಹೇಳಲಾಗಿದೆ. ಹತ್ಯೆಯ ಹಿಂದಿನ ಕಾರಣ ಇನ್ನೂ ಬಹಿರಂಗವಾಗಿಲ್ಲ.

ಅವರ ಸಾವಿನ ಸುದ್ದಿ ತಿಳಿದ ಹಿಂದುತ್ವ ಪರ ಸಂಘಟನೆಗಳ ಸದಸ್ಯರು ಆಸ್ಪತ್ರೆಯ ಹೊರಗೆ ಜಮಾಯಿಸಿ ಪಟ್ಟಣದ ಸೀಗೆಹಟ್ಟಿ ಪ್ರದೇಶದಲ್ಲಿ ವಾಹನಗಳಿಗೆ ಬೆಂಕಿ ಹಚ್ಚಿದ್ದು, ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.

ಮರಣೋತ್ತರ ಪರೀಕ್ಷೆಯ ನಂತರ, ಹರ್ಷ ಅವರ ಪಾರ್ಥಿವ ಶರೀರವನ್ನು ಅವರ ನಿವಾಸಕ್ಕೆ ಕೊಂಡೊಯ್ಯುವ ಸಂದರ್ಭದಲ್ಲಿ ನೂರಾರು ಬಜರಂಗದಳದ ಸದಸ್ಯರು ಪಾಲ್ಗೊಂಡಿದ್ದರು.

ಮೆರವಣಿಗೆ ನಡೆಯುತ್ತಿರುವಾಗ ಕೆಲವು ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ ಪರಿಸ್ಥಿತಿಯ ಲಾಭ ಪಡೆಯಲು ಯತ್ನಿಸಿದ್ದಾರೆ ಎಂಬ ಮಾಹಿತಿಯಿದೆ.

ಸಂಘಟನೆಗಳ ನಿಷೇಧಿಸುವ ಬಗ್ಗೆ ಮಾತನಾಡಿದ ಅವರು, ‘ಸದ್ಯಕ್ಕೆ ಯಾವುದೇ ಸಂಘಟನೆ ನಿಷೇಧಿಸುವ ಬಗ್ಗೆ ನಿರ್ಧರಿಸಿಲ್ಲ. ಅದಕ್ಕೆ ಕಾನೂನು ಪ್ರಕ್ರಿಯೆಗಳಿವೆ, ಮುಂದೆ ನೋಡೋಣ. ಸಮಯಾವಕಾಶ ನೋಡಿಕೊಂಡು ಸಂಘಟನೆ ನಿಷೇಧಿಸುತ್ತೇವೆ. ಯಾವುದನ್ನೂ ಬಾಯಿಬಿಟ್ಟು ಹೇಳುವಂತಹ ಸ್ಥಿತಿಯಲ್ಲಿಲ್ಲ’ ಎಂದು ಹೇಳಿದರು.



Join Whatsapp