ಬೆಂಗಳೂರು: ಸಚಿವ ಈಶ್ವರಪ್ಪ ಅವರ ಹೇಳಿಕೆಯನ್ನು ಮುಂದಿಟ್ಟುಕೊಂಡು ಪ್ರತಿಭಟನೆಯ ನೆಪದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಸದನದ ಕಲಾಪಕ್ಕೆ ಅಡ್ಡಿಪಡಿಸಿದ್ದು, ಇದನ್ನು ವಿರೋಧಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಹಮ್ಮಿಕ್ಕೊಂಡಿದೆ.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕ ಬಂಡೆಪ್ಪ ಕಾಶಂಪುರ್, “ಎರಡೂ ರಾಷ್ಟ್ರೀಯ ಪಕ್ಷಗಳು ಸದನದ ಸಮಯ ಹಾಳು ಮಾಡುತ್ತಿವೆ. ಜನರ ಸಮಸ್ಯೆಗಳನ್ನು ಚರ್ಚಿಸಲು ಈ ಪಕ್ಷಗಳಿಗೆ ಆಸಕ್ತಿ ಇಲ್ಲ. ಬೆಳಗಾವಿಯಲ್ಲಿ ಕೂಡಾ ಸದನ ಸರಿಯಾಗಿ ನಡೆಯುತ್ತಿಲ್ಲ.ಜನರ ತೆರಿಗೆ ಹಣ ಅನಗತ್ಯವಾಗಿ ಪೋಲಾಗುತ್ತಾ ಇದೆ. ಕೋವಿಡ್ ನಿರ್ವಹಣೆ ಕೂಡ ಸರ್ಕಾರ ಸರಿಯಾಗಿ ಕಾರ್ಯನಿರ್ವಹಿಸಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ಕಾಂಗ್ರೆಸ್ ಗೆ ಹಿಜಾಬ್ ವಿವಾದದಿಂದ ರಾಜಕೀಯವಾಗಿ ಹಿನ್ನೆಡೆಯಾಗಿದೆ. ಇದನ್ನು ಮರೆಮಾಚಲು ಈಶ್ವರಪ್ಪ ಅವರ ಹೇಳಿಕೆ ವಿಚಾರವನ್ನು ಮುಂದಿಟ್ಟುಕ್ಕೊಂಡು ವಿಪಕ್ಷ ಕಾಂಗ್ರೆಸ್ ಸದನದಲ್ಲಿ ಪ್ರತಿಭಟನೆಗೆ ಮುಂದಾಗಿದೆ. ಸದನದಲ್ಲಿ ಕೇವಲ ಕಾಲಹರಣ ಮಾಡುವುದಷ್ಟೇ ಇವರಿಬ್ಬರ ಉದ್ದೇಶ. ಜೆಡಿಎಸ್ ಪಕ್ಷ ಕಲಾಪದಲ್ಲಿ ಭಾಗವಹಿಸಲು ಸಿದ್ಧವಾಗಿದ್ದರೂ ಎರಡೂ ಪಕ್ಷಗಳು ಇದಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಅವರು ಆರೋಪಿಸಿದರು.
ಪ್ರತಿಪಕ್ಷಗಳ ಮನವೊಲಿಕೆಗೆ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಸಭಾಪತಿಗಳಿಗೆ ಮನವಿ ಮಾಡಿಕೊಳ್ಳುತ್ತೇನೆ. ಸದನ ನಡೆಸುವುದಕ್ಕೆ ಅನುವು ಮಾಡಿಕೊಡಿ ಎಂದು ಮಾಡಿದರೂ, ಕಾಂಗ್ರೆಸ್ ನವರು ಅದನ್ನು ನಡೆಸೋಕೆ ಬಿಡ್ತಿಲ್ಲ. ಈ ನಿಟ್ಟಿನಲ್ಲಿ ಸದನ ಇವತ್ತಿನಿಂದ ನಡೆಸಲು ಅವಕಾಶ ಕಲ್ಪಿಸಲಿ. ರೈತರ ಸಮಸ್ಯೆಗಳು ಸಾಕಷ್ಟು ಇದ್ದು, ಚರ್ಚೆ ಮಾಡುವುದು ಯಾವಾಗ ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ಈಶ್ವರಪ್ಪ ಅವರ ವಿರುದ್ಧ ಪ್ರತಿಭಟನೆಯ ಹೆಸರಿನಲ್ಲಿ ರಾಜ್ಯದ ಜನರ ತೆರಿಗೆ ದುಡ್ಡನ್ನು ಹಾಳು ಮಾಡುತ್ತಿದ್ದಾರೆ. ರಾಜ್ಯದಲ್ಲೀ ಈಗಾಗಲೇ ಅನೇಕ ಜ್ವಲಂತ ಸಮಸ್ಯೆಗಳಿವೆ. ಕಾಂಗ್ರೆಸ್ ನವರು ಮೇಕೆದಾಟು ಪಾದಯಾತ್ರೆ ಮಾಡಿದ್ದರು. ಇದೀಗ ಎಲ್ಲಿಗೆ ಹೋಗಿದೆ ಅವರ ಜವಾಬ್ದಾರಿ. ರಾಜ್ಯದ ಜನರ ಸಮಸ್ಯೆ ಸದನದಲ್ಲಿ ಚರ್ಚೆ ಮಾಡಿ. ಬಿಎಸಿ ಕರೆದು ಸಭಾಧ್ಯಕ್ಷರು, ಸಭಾಪತಿಗಳು ಈ ಬಗ್ಗೆ ಕಾಂಗ್ರೆಸ್ ನವರ ಮನವೊಲಿಸಿಕೊಂಡು ಮಾತಾಡಲಿ ಎಂದು ಸೂಚಿಸಿದರು.
ಪ್ರತಿಭಟನಾ ಶಾಸಕರಾದ ಬಂಡೆಪ್ಪ ಕಾಶಂಪುರ್, ನಾಡಗೌಡ, ಸಿ.ಎಸ್ ಪುಟ್ಟರಾಜು, ಅನ್ನದಾನಿ, ಪರಿಷತ್ ಸದಸ್ಯರಾದ ಬೋಜೇಗೌಡ, ತಿಪ್ಪೇಸ್ವಾಮಿ ಗೋವಿಂದರಾಜು ಸೇರಿದಂತೆ ಹಲವು ಜೆಡಿಎಸ್ ಮುಖಂಡರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.