ಶಿವಮೊಗ್ಗ ಬಜರಂಗ ದಳದ ಕಾರ್ಯಕರ್ತನ ಹತ್ಯೆ ಹಿಂದೆ ಸಚಿವ ಈಶ್ವರಪ್ಪ ಕೈವಾಡ ಶಂಕೆ: ಬಿ.ಕೆ.ಹರಿಪ್ರಸಾದ್

Prasthutha|

ಬೆಂಗಳೂರು: ದೇಶದ್ರೋಹದ ಹೇಳಿಕೆ ನೀಡಿರುವ ಸಚಿವ ಈಶ್ವರಪ್ಪ ಅವರ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ಶಾಸಕರು ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಇದರಿಂದ ತಪ್ಪಿಸಿಕೊಳ್ಳಲು ಶಿವಮೊಗ್ಗದ ಬಜರಂಗದಳದ ಕಾರ್ಯಕರ್ತನನ್ನು ಈಶ್ವರಪ್ಪ ಅವರೇ ಕೊಲೆ ಮಾಡಿಸಿರಬಹುದು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಆರೋಪಿಸಿದ್ದಾರೆ.

- Advertisement -

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಹತ್ಯೆಯ ಬಗ್ಗೆ ಸಿಬಿಐ ಅಥವಾ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಯಾವುದೇ ಹಲ್ಲೆ, ಕೊಲೆ ನಡೆದಾಗ ಮುಸ್ಲಿಮರ ಮೇಲೆ ಆಪಾದನೆ ಹೊರಿಸುವುದು ಬಿಜೆಪಿ ಮತ್ತು ಸಂಘಪರಿವಾರದವರಿಗೆ ಫ್ಯಾಶನ್ ಆಗಿದೆ. ಈ ಪ್ರಯೋಗವನ್ನು ಅವರು ಹಿಂದೆ ಕರಾವಳಿಯಲ್ಲಿ ಮಾಡಿದ್ದರು. ಈಗ ಇದನ್ನು ಶಿವಮೊಗ್ಗಕ್ಕೂ ವಿಸ್ತರಿಸಿದ್ದಾರೆ ಎಂದು ಹರಿಪ್ರಸಾದ್ ಕಿಡಿಕಾರಿದರು.

- Advertisement -

ಈ ಹಿಂದೆ ಶಿವಮೊಗ್ಗದಲ್ಲಿ ಸಂಘಪರಿವಾರದ ಕಾರ್ಯಕರ್ತನ ಹತ್ಯೆಯಾದಾಗ ಅಲ್ಪಸಂಖ್ಯಾತ ಸಮುದಾಯದ ಮೇಲೆ ಆರೋಪ ಹೊರಿಸಲಾಗಿತ್ತು. ಆದರೆ ತನಿಖೆಯ ಬಳಿಕ ಇದನ್ನು ಬೇರೆಯವರು ನಡೆಸಿದ್ದರು ಎಂಬುದು ಸಾಬೀತಾಗಿತ್ತು ಎಂದು ಹರಿಪ್ರಸಾದ್ ಸ್ಮರಿಸಿದರು.

ಈಶ್ವರಪ್ಪ ಅವರು ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಮತ್ತು ರಾಜೀನಾಮೆ ಕೊಡುವುದರಿಂದ ತಪ್ಪಿಸಿಕೊಳ್ಳಲು ಅವರೇ ಈ ಕೊಲೆ ಮಾಡಿಸಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ ಎಂದ ಹರಿಪ್ರಸಾದ್, ಕೂಡಲೇ ಈಶ್ವರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪುನರುಚ್ಚರಿಸಿದರು.

 ಜವಾಬ್ದಾರಿಯುತ ಸ್ಥಾನದಲ್ಲಿ ಇರುವ ಈಶ್ವರಪ್ಪ ಹೇಳಿಕೆ ಅಶಾಂತಿ ಉಂಟುಮಾಡುವ ಹೇಳಿಕೆಯಾಗಿದ್ದು, ಪೊಲೀಸ್ ತನಿಖೆ ನಡೆಯದೇ ಈಶ್ವರಪ್ಪ ಅವರು ಹರ್ಷ ಕೊಲೆಯಲ್ಲಿ ಮುಸ್ಲಿಮ್ ಗೂಂಡಾಗಳ ಕೈವಾಡವಿದೆ ಎಂದು ತೀರ್ಪು ಕೊಟ್ಟಿದ್ದಾರೆ. ರಾಜ್ಯದಲ್ಲಿರುವ ಶಾಂತಿಯನ್ನು ಕದಡಿ ಯಾರನ್ನೋ ಸಿಲುಕಿಸುವ ಯತ್ನ ನಡೆಯುತ್ತಿದೆ ಎಂದು ಹರಿಪ್ರಸಾದ್ ಆರೋಪಿಸಿದರು.

ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಈಶ್ವರಪ್ಪರ ಹೇಳಿಕೆ ಸರಿಯಲ್ಲ. ಇದು ಅಶಾಂತಿ ಸೃಷ್ಟಿಸುವ ಹೇಳಿಕೆಯಾಗಿದ್ದು, ಇದು ಅವರ ಸ್ಥೂಲ ಕಲ್ಪನೆ. ಅಪರಾಧಿಗಳು ಯಾರು ಎಂಬುದು ಇನ್ನೂ ತನಿಖೆಯೇ ಆಗಿಲ್ಲ. ಆಗಲೇ ಕೋಮುಗಲಭೆ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಜನರ ದಾರಿ ತಪ್ಪಿಸಲು ಹೇಳಿಕೆ ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಈಗಾಗಲೇ ನಾವು ಸಚಿವ ಈಶ್ವರಪ್ಪ ಅವರ ರಾಜೀನಾಮೆ ಕೇಳಿದ್ದೇವೆ. ಅದನ್ನ ಅವರು ಕೊಡಲೇಬೇಕು. ಪೊಲೀಸರ ತನಿಖೆಯಾಗದೆ ಆಪಾದನೆ ಮಾಡುತ್ತಿದ್ದಾರೆ ಎಂದು ಈಶ್ವರಪ್ಪ ವಿರುದ್ಧ ಹರಿಪ್ರಸಾದ್ ವಾಗ್ದಾಳಿ ನಡೆಸಿದರು.

ತನಿಖೆ ನಡೆಸುವುದು ಪೊಲೀಸರ ಜವಾಬ್ದಾರಿ. ಇಂತಹ ಸಂದರ್ಭದಲ್ಲಿ ಇಂಟೆಲಿಜೆನ್ಸ್ ಏನು ಮಾಡುತ್ತಿದೆ. ಡಿ.ಕೆ ಶಿವಕುಮಾರ್ ಮೇಲೆ ಆಪಾದನೆ ಮಾಡಿ ಏನೂ ಸಾಧಿಸಲಾಗದು. ಕ್ರಿಮಿನಲ್ ಹಿನ್ನೆಲೆಯುಳ್ಳವರೇ ಸಚಿವರಾಗಿದ್ದಾರೆ ಎಂದು ಹೇಳಿದರು.

ಕೋಮು ಬಣ್ಣ ಕಟ್ಟಿ ಯಾರನ್ನೋ ಖಳನಾಯಕ ಮಾಡುವುದು ಈಶ್ವರಪ್ಪ ಅವರಿಗೆ, ಬಿಜೆಪಿ ಅವರಿಗೆ ಹೊಸದಲ್ಲ. ಈ ಹಿಂದೆಯೂ ಶಿವಮೊಗ್ಗದಲ್ಲಿ ಕೊಲೆ ನಡೆದಿತ್ತು, ಆಗಲೂ ಮುಸ್ಲಿಮರ ಮೇಲೆ ಆಪಾದನೆ ಮಾಡಿದ್ದರು. ಆ ಬಳಿಕ ಹತ್ಯೆಯ ಹಿಂದೆ ಹಿಂದೂಗಳು ಆರೋಪಿಗಳು ಎಂಬುದು ಗೊತ್ತಾಗಿತ್ತು ಎಂದು ಹರಿಪ್ರಸಾದ್ ಹೇಳಿದರು.

  ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಮಾತನಾಡಿ,  ರಾಷ್ಟ್ರ ದ್ರೋಹದ ಹೇಳಿಕೆ ನೀಡಿರುವ ಈಶ್ವರಪ್ಪನವರದ್ದು ಅಲ್ಪಸಂಖ್ಯಾತ ವಿರೋಧಿ ಮಾನಸಿಕತೆಯಾಗಿದೆ. ಯಾರ ತಪ್ಪು ಮಾಡಿದರೂ ಶಿಕ್ಷೆ ಆಗಲಿ. ಈಶ್ವರಪ್ಪ ಹೇಳಿಕೆ ಪ್ರಚೋದನಾಕಾರಿ ಹೇಳಿಕೆಯಾಗಿದೆ. ಇನ್ನೂ ತನಿಖೆಯೇ ಆಗಿಲ್ಲ, ಈಗಲೇ ಅವರು ತೀರ್ಪು ನೀಡುವುದು ಖಂಡನೀಯ ಎಂದರು.

  ಮೊದಲು ತನಿಖೆ ಆಗಲಿ, ಮಾಹಿತಿ ಹೊರಬೀಳಲಿ, ಇಲ್ಲಿ ಈಶ್ವರಪ್ಪ ದೇಶ ದ್ರೋಹದ ವಿರುದ್ಧ ಪ್ರತಿಭಟನೆ ಮಾಡಿದರೆ

ಶಿವಮೊಗ್ಗದಲ್ಲಿ ಈಶ್ವರಪ್ಪ ಅವರನ್ನು ಸ್ವಾಗತ ಮಾಡುತ್ತಾರೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದವರ ರೀತಿ ಸ್ವಾಗತ ಮಾಡಲಾಗಿದೆ. ಇದರಲ್ಲೇ ಗೊತ್ತಾಗುತ್ತೆ ಅವರ ಮಾನಸಿಕ ಸ್ಥಿತಿ ಏನು ಎನ್ನುವುದು ಎಂದು  ಹೇಳಿದರು.



Join Whatsapp