ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ । ಗುಜರಾತ್ ಬಿಜೆಪಿಯ ಪ್ರಚೋದನಾಕಾರಿ ಟ್ವೀಟ್ ಅನ್ನು ಅಳಿಸಿ ಹಾಕಿದ ಟ್ವಿಟ್ಟರ್ ಸಂಸ್ಥೆ

Prasthutha|

ಸೂರತ್: 2008 ರ ಅಹಮದಾಬಾದ್ ಸ್ಫೋಟ ಪ್ರಕರಣದಲ್ಲಿ ಬಂಧಿತರಾಗಿ ಮರಣದಂಡನೆಗೊಳಗಾಗಿರುವ ಅಪರಾಧಿಗಳನ್ನು ವ್ಯಂಗ್ಯವಾಗಿ ಚಿತ್ರೀಕರಿಸಿ ಟ್ವೀಟ್ ಮಾಡಿದ ಬಿಜೆಪಿ ಗುಜರಾತ್ ರಾಜ್ಯ ಘಟಕದ ಪೋಸ್ಟ್ ಅನ್ನು ಟ್ವಿಟ್ಟರ್ ಸಂಸ್ಥೆ ಅಳಿಸಿ ಹಾಕಿದೆ.

- Advertisement -

ಮೈಕ್ರೋ – ಬ್ಲಾಗಿಂಗ್ ವೆಬ್ ಸೈಟ್ ನಿಯಮಗಳನ್ನು ಉಲ್ಲಂಘಣೆಯ ಆರೋಪದಲ್ಲಿ ಟ್ವಿಟ್ಟರ್ ಸಂಸ್ಥೆ ಬಿಜೆಪಿಯ ವಿರುದ್ಧ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ.

“ಸತ್ಯಮೇವ ಜಯತೆ” ಮತ್ತು “ಭಯೋತ್ಪಾದನೆಯನ್ನು ಹರಡುವವರಿಗೆ ಕ್ಷಮೆ ಇಲ್ಲ” ಎಂಬ ಶೀರ್ಷಿಕೆಯೊಂದಿಗೆ ತಲೆಬುರುಡೆಯ ಮೇಲೆ ಟೋಪಿ ಮತ್ತು ಉದ್ದನೆಯ ಗಡ್ಡದ ಪುರುಷರ ವ್ಯಂಗ್ಯಚಿತ್ರವನ್ನು ಬಿಜೆಪಿಯ ಟ್ವೀಟ್’ನಲ್ಲಿ ತೋರಿಸಿದೆ.ಫೆಬ್ರವರಿ 19 ರಂದು, ರಾಜ್ಯ ಬಿಜೆಪಿ ತನ್ನ ಅಧಿಕೃತ ಹ್ಯಾಂಡಲ್ @BJP4Gujarat ನಿಂದ ವ್ಯಂಗ್ಯಚಿತ್ರವನ್ನು ಟ್ವೀಟ್ ಮಾಡಿತ್ತು.

- Advertisement -

ಈ ವ್ಯಂಗ್ಯಚಿತ್ರವು ಫೆಬ್ರವರಿ 18 ರಂದು ಅಂಗೀಕರಿಸಲ್ಪಟ್ಟ ವಿಶೇಷ ನ್ಯಾಯಾಲಯದ ತೀರ್ಪನ್ನು ಆಧರಿಸಿದ್ದು, ಇದು 2008 ರ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದ್ದಾಗಿದೆ. ಈ ಸ್ಫೋಟದಲ್ಲಿ ಕನಿಷ್ಠ 56 ಜನರು ಸಾವನ್ನಪ್ಪಿದರು ಮತ್ತು 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ನ್ಯಾಯಾಲಯವು ಬಂಧಿತ 38 ಜನರಿಗೆ ಮರಣದಂಡನೆ ಮತ್ತು 11 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಬಿಜೆಪಿ ಈ ವ್ಯಂಗ್ಯಚಿತ್ರವನ್ನು ಟ್ವೀಟ್ ಮಾಡಿದ ಬೆನ್ನಲ್ಲೇ, ಅದನ್ನು ತೆಗೆದುಹಾಕುವಂತೆ ಹಲವಾರು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿ, ಟ್ವಿಟರ್‌ ಗೆ ವರದಿ ಮಾಡುವುದರೊಂದಿಗೆ ಪೋಸ್ಟ್ ವಿವಾದವನ್ನು ಸೃಷ್ಟಿಸಿತ್ತು. ಈ ಪೋಸ್ಟ್ ಅನ್ನು ಹಲವು ಸಂಘಪರಿವಾರದ ಕಾರ್ಯಕರ್ತರು ಸಮರ್ಥಿಸಿಕೊಂಡಿದ್ದರು.

ಸದ್ಯ ಬ್ಲಾಗಿಂಗ್ ನಿಯಮಗಳ ಉಲ್ಲಂಘನೆಗಾಗಿ ಟ್ವಿಟರ್ ಪೋಸ್ಟ್ ಅನ್ನು ತೆಗೆದುಹಾಕಿದೆ ಎಂದು ಹೇಳಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ರಾಜ್ಯ ಬಿಜೆಪಿ ವಕ್ತಾರ ಯಜ್ಞೇಶ್ ದವೆ, “ಪೋಸ್ಟ್‌ನಲ್ಲಿ ಯಾವುದೇ ತಪ್ಪಿಲ್ಲ, ಇಡೀ ಮಾಧ್ಯಮವು ನ್ಯಾಯಾಲಯದ ಆದೇಶವನ್ನು ಒಂದೇ ರೀತಿಯ ಚಿತ್ರಗಳೊಂದಿಗೆ ವರದಿ ಮಾಡಿದೆ. ಭಯೋತ್ಪಾದನೆಯನ್ನು ಬೆಂಬಲಿಸುವ ಜನರು ಅದನ್ನು Twitter ಗೆ ವರದಿ ಮಾಡಿದ್ದರಿಂದ ನಮ್ಮ ಪೋಸ್ಟ್ ಅನ್ನು ಅಳಿಸಲಾಗಿದೆ. ನಾವು ಖಂಡಿತವಾಗಿಯೂ ಟ್ವಿಟ್ಟರ್ ವಿರುದ್ಧ ಕ್ರಮಕ್ಕೆ ಪ್ರಯತ್ನಿಸುತ್ತೇವೆ.” ಎಂದು ತಿಳಿಸಿದ್ದಾರೆ.

ಬಿಜೆಪಿಯ ಇನ್‌ಸ್ಟಾಗ್ರಾಮ್ ಪುಟದಲ್ಲಿ ಇದೇ ರೀತಿಯ ವ್ಯಂಗ್ಯಚಿತ್ರವು ಭಾರಿ ವಿವಾದವನ್ನು ಸೃಷ್ಟಿಸಿದೆ.



Join Whatsapp