ಶಿವಮೊಗ್ಗ: ವಿಶ್ವಹಿಂದೂ ಪರಿಷತ್ ಕೋಟೆ ಪ್ರಖಂಡದ ಸಹ ಕಾರ್ಯದರ್ಶಿ 23 ವರ್ಷದ ಯುವಕ ಹರ್ಷ ಎಂಬಾತನ ಕೊಲೆ ಪ್ರಕರಣದಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಪೊಲೀಸರು ಇಂದು ಬೆಳಗ್ಗೆ ವಶಕ್ಕೆ ಪಡೆದಿದ್ದಾರೆ.
ಈತನ ಬಂಧನ ಮೂಲಕ ಕೊಲೆ ಪ್ರಕರಣದಲ್ಲಿ ಯಾರೆಲ್ಲಾ ಇದ್ದಾರೆ, ಯಾವ ಕಾರಣಕ್ಕಾಗಿ ಈ ಕೊಲೆ ನಡೆದಿದೆ, ಹೀಗೆ ಎಲ್ಲಾ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ಆರೋಪಿಗಳು ನಿನ್ನೆ ರಾತ್ರಿ ಕಾರಿನಲ್ಲಿ ಬಂದು ಕೊಲೆ ಮಾಡಿ ಆಟೋದಲ್ಲಿ ಪರಾರಿಯಾಗಿದ್ದರು
ಘಟನೆಯ ನಂತರ ಖಾಸಗಿ ಬಸ್ ನಿಲ್ದಾಣ ಸೇರಿದಂತೆ ಹಲವು ಮುಸ್ಲಿಮ್ ಬಾಹುಳ್ಯದ ಪ್ರದೇಶಗಳಲ್ಲಿ ಕಿಡಿಗೇಡಿಗಳು ಅಂಗಡಿ ಮುಂಗಟ್ಟುಗಳ ಮೇಲೆ ಕಲ್ಲುತೂರಾಟ ನಡೆಸಿ, ಬೈಕ್ ಗಳಿಗೆ ಬೆಂಕಿ ಹಚ್ಚಿ ಜನರು ದಾಂಧಲೆ ನಡೆಸಿದ್ದರು.
ಮುಂಜಾಗ್ರತಾ ಕ್ರಮವಾಗಿ ನಗರದಾದ್ಯಂತ ಫೆ.21ರಿಂದ ಎರಡು ದಿನ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ನಗರ ಪಾಲಿಕೆ ವ್ಯಾಪ್ತಿಯ ಎಲ್ಲ ಶಾಲಾ ಕಾಲೇಜುಗಳಿಗೆ ಫೆ. 21ರಂದು ಜಿಲ್ಲಾಡಳಿತ ರಜೆ ಘೋಷಿಸಿದೆ.
ಇಂದು ಬೆಳಗ್ಗೆ ಹರ್ಷನ ಶವ ಇರುವ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ, ಕೊಲೆ ಆರೋಪಿಗಳ ಸುಳಿವು ಸಿಕ್ಕಿದ್ದು, ಕೂಡಲೇ ಬಂಧಿಸಲಾಗುವುದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು, ಜನರು ಶಾಂತ ರೀತಿಯಿಂದ ವರ್ತಿಸಬೇಕೆಂದು ಕೋರಿದ್ದರು.