ವಸ್ತ್ರ ಸಂಹಿತೆ ವಿಚಾರದಲ್ಲಿ ಸಾಮಾಜಿಕ ಸಾಮರಸ್ಯ ಅಗತ್ಯ; ವಿವಿಧ ಧಾರ್ಮಿಕ ಗುರುಗಳ ಆಗ್ರಹ

Prasthutha|

ಬೆಂಗಳೂರು: ರಾಜ್ಯದಲ್ಲಿ ಭುಗಿಲೆದ್ದಿರುವ ಶಿರವಸ್ತ್ರ-ಕೇಸರಿ ಶಾಲು ವಿವಾದಕ್ಕೆ ಸಂಬಂಧ ಹೈಕೋರ್ಟಿನ ಅಂತಿಮ ತೀರ್ಪು ಹೊರಬೀಳುವರೆಗೂ ನಾವೆಲ್ಲರೂ ಸಾಮರಸ್ಯದಿಂದ ಇರೋಣ ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಕರೆ ನೀಡಿದ್ದಾರೆ.
ಶನಿವಾರ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು, ಕೊರೋನಾ ನಿಸರ್ಗದತ್ತ ಸಮಸ್ಯೆಯಾದರೆ, ಹಿಜಾಬ್-ಕೇಸರಿ ಶಾಲು ವಿವಾದ ಮಾನವ ನಿರ್ಮಿತ ಸಂದಿಗ್ಧತೆಯಾಗಿದೆ. ಇವರೆರಡರ ನಡುವೆಯಲ್ಲಿ ನಾವೆಲ್ಲರೂ ವೀಕ್ಷರಾಗಿದ್ದೇವೆ. ಇಂತಹ ಸಂದರ್ಭದಲ್ಲಿ ಸಾಮರಸ್ಯ ಮೂಡಿಸುವುದು ಮುಖ್ಯವಾಗಿದೆ. ಹಾಗಾಗಿ ಸಭೆಯನ್ನು ಆಯೋಜಿಸಿ ಚರ್ಚೆ ಮಾಡುತ್ತಿದ್ದೇವೆ. ಹಾಗೆಯೇ ರಾಜಕೀಯ ಪಕ್ಷಗಳು ಸಾಮಾನ್ಯ ಸಭೆಯೊಂದನ್ನು ಆಯೋಜಿಸಿ ಚರ್ಚೆ ಮಾಡಿ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.
ಅಲ್ಲದೆ, ವಿದ್ಯೆ ಕೆಟ್ಟರೆ ಇಡೀ ಜೀವನವೇ ನಾಶವಾಗುತ್ತದೆ. ಹಾಗಾಗಿ ವಿದ್ಯೆ ಹಾಳಾಗದಂತೆ ಸೂಕ್ತ ವಾತಾವರಣವನ್ನು ನಿರ್ಮಿಸಬೇಕು. ನ್ಯಾಯಾಲಯದಿಂದ ಸ್ಪಷ್ಟ ಆದೇಶ ಬರುವವರೆಗೂ ನಾವು ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ನುಡಿದರು.
ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳು ಮಾತನಾಡಿ, ಬಾಬಾ ಸಾಹೇಬರು ಬರೆದಿರುವ ಸಂವಿಧಾನದಲ್ಲಿ ಎಲ್ಲಾ ವಿಚಾರಗಳಿಗೂ ಪರಿಹಾರವಿದೆ. ಅನೇಕ ಜಾತಿಗಳ ಜಾತ್ಯತೀತ ಹಾಗೂ ಸರ್ವ ಧರ್ಮಗಳಿಗೆ ನೆಲೆಯಾಗಿರುವ ದೇಶದಲ್ಲಿ ಧಾರ್ಮಿಕ ವಿಚಾರಗಳಿಗೆ, ಜಾತಿ ವಿವಾದಗಳಿಗೆ ಅವಕಾಶ ನೀಡಬಾರದು. ಸಂವಿಧಾನದ ಮೂಲಭೂತ ಹಕ್ಕಾದ ಶಿಕ್ಷಣಕ್ಕೆ ಯಾವುದೇ ತೊಂದರೆ ಮಾಡಬಾರದು ಎಂದು ತಿಳಿಸಿದರು.
ಸುನ್ನಿ ಜಮೀಯತ್ ಕರ್ನಾಟಕದ ಅಧ್ಯಕ್ಷ ಮೌಲಾನ ಶಬ್ಬೀರ್ ಹಾಶ್ಮಿ ಮಾತನಾಡಿ, ಹಿಜಾಬ್ ಕೇವಲ ಒಂದು ತಿಂಗಳಿಂದ ಮಾತ್ರ ಧರಿಸುತ್ತಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಯಬೇಕಾಗಿದೆ. ಇದನ್ನು ತಿಳಿಯದೇ ಸರ್ವದರ್ಮ ಸಾಮರಸ್ಯದಿಂದ ಕೂಡಿದ ರಾಜ್ಯದಲ್ಲಿ ಕೋಮು ವಾತಾವರಣವನ್ನು ಸೃಷ್ಟಿಸಲಾಗಿದೆ. ಶಿಕ್ಷಣವು ಮುಖ್ಯವಾಗಿದ್ದು, ಧರ್ಮದ ಹೆಸರಿನಲ್ಲಿ ಅದನ್ನು ಹಾಳು ಮಾಡುವುದು ಸರಿಯಲ್ಲ. ಹಾಗಾಗಿ ಪುನಃ ಸರ್ವಧರ್ಮ ಸಾಮರಸ್ಯವನ್ನು ಸ್ಥಾಪಿಸುವುದು ಸರಕಾರದ ಮೊದಲ ಕರ್ತವ್ಯವಾಗಿದೆ ಎಂದು ಹೇಳಿದರು.
ಬೆಂಗಳೂರಿನ ಸಿಟಿ ಮಾರ್ಕೆಟ್ ಜಾಮೀಯಾ ಮಸೀದಿಯ ಮೌಲಾನ ಮಕ್ಸೂದ್ ಇಮ್ರಾನ್ ಸಾಹೇಬ್ ಮಾತನಾಡಿ, ಕೋವಿಡ್ನಿಂದ ಕೆಂಗೆಟ್ಟಿದ್ದ ಶೈಕ್ಷಣಿಕ ವ್ಯವಸ್ಥೆ ಮತ್ತೊಮ್ಮೆ ಹಿಜಾಬ್-ಕೇಸರಿ ಶಾಲು ವಿವಾದದಿಂದ ಕೆಂಗೆಟ್ಟಿದೆ. ಇಸ್ಲಾಮಿನಲ್ಲಿ ಯಾವುದಕ್ಕೂ ಬಲವಂತ ಎಂಬುದು ಇಲ್ಲ, ಬದಲಾಗಿ ಮಕ್ಕಳಿಗೆ ಒಳ್ಳಯ ದಾರಿಯನ್ನು ತೋರಿಸುತ್ತೇವೆ. ಇದನ್ನು ಧಿಕ್ಕರಿಸಿದರೆ, ಅವರ ಇಷ್ಟಕ್ಕೂ ಅವಕಾಶ ನೀಡುತ್ತೇವೆ. ಮಕ್ಕಳು ಹಿಜಾಬ್ ಧರಿಸಿ ಶಾಲೆಗೆ ಬರುವುದರಲ್ಲಿ ಯಾವುದೇ ರಾಜಕೀಯ ಪಕ್ಷಗಳ ಒತ್ತಡವಾಗಲೀ, ಹಿರಿಯರ ಬಲವಂತವಾಗಲೀ ಇಲ್ಲ. ಇಷ್ಟು ದಿನ ಇಲ್ಲದ ವಿವಾದ ಈಗ ಸೃಷ್ಟಿಯಾಗಿದೆ. ಇವೆಲ್ಲದರ ಕುರಿತು, ಶೈಕ್ಷಣಿಕ ಸಂಸ್ಥೆಗಳ ಆಡಳಿತ ಮಂಡಳಿಗಳು ನಿಷ್ಪಕ್ಷಪಾತವಾಗಿ ಅರ್ಥ ಮಾಡಿಕೊಳ್ಳಬೇಕು. ಹಾಗೆಯೇ ಸರಕಾರವು ಉಚ್ಚ ನ್ಯಾಯಾಲಯದ ಮಧ್ಯಂತರ ಆದೇಶದ ಕುರಿತು ಇರುವ ಗೊಂದಲಗಳಿಗೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.



Join Whatsapp