ಮಂಗಳೂರು: ಮುಸ್ಲಿಮರ ಸಾಂಪ್ರದಾಯಿಕ ವಸ್ತ್ರ ಶೈಲಿಯಾದ ಹಿಜಾಬ್’ಅನ್ನು ಅಪಾಯಕಾರಿ ಎಂಬಂತೆ ಬಿಂಬಿಸಲಾಗುತ್ತಿದೆ. ಸಮವಸ್ತ್ರದ ಶಾಲನ್ನು ತಲೆಗೆ ಸರಿಸುವುದೇ ಹಿಜಾಬ್ ಆಗಿದೆ. ಇದಕ್ಕೆ ಆಸ್ಪದ ನೀಡದಿರುವುದು ಅಮಾನವೀಯ ಮತ್ತು ಅಸಹಿಷ್ಣುತೆಯ ಕ್ರಮವಾಗಿದೆ ಎಂದು ಪ್ರಮುಖ ಧಾರ್ಮಿಕ ವಿದ್ವಾಂಸರಾದ ಎಸ್.ಬಿ. ಮುಹಮ್ಮದ್ ದಾರಿಮಿ ಹೇಳಿದ್ದಾರೆ.
ಹಿಜಾಬ್ ಕುರಿತಾದ ಹೈಕೋರ್ಟ್’ನ
ಮಧ್ಯಂತರ ಆದೇಶವನ್ನು ಉದ್ದೇಶ ಪೂರ್ವಕವಾಗಿ ತಪ್ಪಾಗಿ ವ್ಯಾಖ್ಯಾನಿಸಿಕೊಂಡು ಹಿಜಾಬ್ ಧರಿಸುತ್ತಿರುವ ವಿದ್ಯಾರ್ಥಿನಿಯರಿಗೆ ಕಾಲೇಜು ಪ್ರವೇಶಿಸಲು ಅನುಮತಿ ನಿರಾಕರಿಸುತ್ತಿರುವ ಕ್ರಮವನ್ನು ಖಂಡಿಸಿ
ದಕ್ಷಿಣ ಕನ್ನಡ ಜಿಲ್ಲಾ
ಜಂಇಯ್ಯತುಲ್ ಖುತ್ಬಾ [ಇಮಾಮರುಗಳ ಒಕ್ಕೂಟ] ವತಿಯಿಂದ ಮಂಗಳೂರು ಕ್ಲಾಕ್ ಟವರ್ ಬಳಿ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
“ಹಿಜಾಬ್ ನನ್ನ ಧಾರ್ಮಿಕ ಹಕ್ಕು, ಸಂವಿಧಾನ ಕೊಟ್ಟ ಅವಕಾಶವಾಗಿದೆ. ಆ ಮೂಲಕ ಸಂವಿಧಾನವವನ್ನು ಕಾಪಾಡಿರಿ, ಶಿಕ್ಷಣ ನೀಡುವ ಶಿಕ್ಷಕರೇ ವಿದ್ಯಾರ್ಥಿಗಳ ಪಾಲಿಗೆ ತಂದೆಯ ಸಮಾನ ನೀವಾಗಿ. ಶಾಲೆ ನಮ್ಮ ಮೂಲ ಆಸ್ತಿ, ಅದೇ ನಮ್ಮ ದೇಶದ ಶಕ್ತಿ, ರಾಜಕೀಯ ಲಾಭಕ್ಕಾಗಿ ಹಿಂದೂ ಮುಸ್ಲಿಂ ಒಡೆದು ಆಳುವ ನೀತಿಯನ್ನು ನಿಲ್ಲಿಸಿ. ಶಿಕ್ಷಣ ಪಡೆಯುವ ಮಕ್ಕಳ ಮೇಲೆ ಕೋಮುವಾದ ಪ್ರಚೋದಿಸುವ ಕೆಲಸ ಮಾಡಬೇಡಿ” ಇತ್ಯಾದಿ ಘೋಷಣೆಗಳನ್ನು ಪ್ರತಿಭಟನಾಕಾರರು ಕೂಗಿದರು.
ಅಬ್ದುಲ್ ಅಝೀಝ್ ದಾರಿಮಿ, ಹಬೀಬುರ್ರಹ್ಮಾನ್ ತಂಙಳ್ ಮತ್ತಿತರರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು. ಇಸಾಕ್ ಪೈಝಿ ದೇರಳಕಟ್ಟೆ, ಬುರ್ಹಾನ್ ಪೈಝಿ ಅಡ್ಯಾರ್, ಇಸ್ಮಾಯಿಲ್ ಫೈಝಿ ಬಂಟ್ವಾಳ, ಇಬ್ರಾಹೀಂ ದಾರಿಮಿ ಕಡಬ, ಮುಸ್ತಫಾ ಯಮಾನಿ, ತಬೂಕ್ ದಾರಿಮಿ, ಇಕ್ಬಾಲ್ ಅಹ್ಮದ್ ಮುಲ್ಕಿ, ಮಜೀದ್ ಫೈಝಿ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ರಶೀದ್ ರಹ್ಮಾನಿ ಸ್ವಾಗತಿಸಿದರು. ನಝೀರ್ ಅಝ್ಹರಿ ಉಪ್ಪಿನಂಗಡಿ ವಂದಿಸಿದರು.