ನಾವು ಡೆಡ್ ಲೈನ್ ಆದರೂ ಕೊಡುತ್ತೇವೆ, ಕಾಂಗ್ರೆಸ್ ತರ ಡೆಡ್ ಆಗಿಲ್ಲ: ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡನಿಗೆ SDPI ತಿರುಗೇಟು

Prasthutha|

ಮಂಗಳೂರು: ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡಿದ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್, ಕಾಂಗ್ರೆಸ್ ನಾಯಕರ ಅಣತಿಯಂತೆ ಎಸ್ ಡಿಪಿಐ ವಿರುದ್ಧ ಅನಗತ್ಯ ವಿಚಾರಗಳನ್ನು ಎಳೆದು ಹಾಕಿ ಅಪಪ್ರಚಾರ ನಡೆಸಿದ್ದಾರೆ. ಜಿಲ್ಲೆಯಲ್ಲಿ ನಡೆದ ಹಲವಾರು ಘಟನೆಗಳನ್ನು ಉಲ್ಲೇಖಿಸುತ್ತಾ ಎಸ್ ಡಿಪಿಐ ಕೇವಲ ಡೆಡ್ ಲೈನ್ ಕೊಡುತ್ತಿದೆ ಎಂದು ಹತಾಶರಾಗಿ ನುಡಿದಿದ್ದಾರೆ. ನಾವು ಡೆಡ್ ಲೈನ್ ಆದರೂ ಕೊಡುತ್ತೇವೆ, ಆದರೆ ಕಾಂಗ್ರೆಸ್ ನಂತೆ ಡೆಡ್ ಆಗಿಲ್ಲ ಎಂದು ಎಸ್ ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ತಿರುಗೇಟು ನೀಡಿದ್ದಾರೆ.

- Advertisement -

ಎಸ್ ಡಿಪಿಐ ರಾಜ್ಯಾಧ್ಯಕ್ಷರು ಮಂಗಳೂರಿನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್ ಸ್ಪಷ್ಟ ನಿಲುವು ತಳೆಯಬೇಕು, ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್ ಮೌನವಾಗಿರುವುದು ಸರಿಯಲ್ಲಿ ಎಂದು ಇತ್ತೀಚೆಗೆ ಟೀಕಿಸಿದ್ದರು.
ಇದಕ್ಕೆ ಪತ್ರಿಕಾಗೋಷ್ಠಿ ಕರೆದು ಕಾಂಗ್ರೆಸ್ ಅಲ್ಪಸಂಖ್ಯಾತರ ಮುಖಂಡ ಶಾಹುಲ್ ಹಮೀದ್ ಹತಾಶೆಯಿಂದ ಎಸ್ಡಿಪಿಐ ಮೇಲೆ ನಿರಾಧಾರ ಆರೋಪ ಹೊರಿಸಿದ್ದಾರೆ ಎಂದು ಸಾದತ್ ಹೇಳಿದ್ದಾರೆ.

ಅಲ್ಪಸಂಖ್ಯಾತರು ಅದರಲ್ಲೂ ವಿಶೇಷವಾಗಿ ಮುಸ್ಲಿಮ್ ಸಮುದಾಯ ಕಳೆದ 75 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ ಕಾರಣದಿಂದ ನೀವು ನಿರಂತರ ಅಧಿಕಾರದ ಸುಖ ಅನುಭವಿಸಿದ್ದೀರಿ, ಆದರೆ ಇಂದು ಮುಸ್ಲಿಮ್ ಸಮುದಾಯ ಸಂಕಷ್ಟದಲ್ಲಿರುವಾಗ ಅದರ ಬಗ್ಗೆ ತುಟಿ ಬಿಚ್ಚಬಾರದೆಂದು ಕೆ.ಪಿ.ಸಿ.ಸಿ ಅಧ್ಯಕ್ಷರು ಫರ್ಮಾನು ಹೊರಡಿಸಿದ್ದಾರೆ, ಆದರೆ ಕೆಲವು ಮುಖಂಡರು ಇನ್ನೊಂದು ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ, ಹಾಗಾದರೆ ಪಕ್ಷದ ಅಧಿಕೃತ ನಿಲುವು ಏನು? ಕಾಂಗ್ರೆಸ್ ಪಕ್ಷದಲ್ಲಿ ಅಲ್ಪಸಂಖ್ಯಾತ ಘಟಕ ಎಂಬುದು ಅಲ್ಪ ಸಂಖ್ಯಾತರ ಹಿತರಕ್ಷಣೆ ಮಾಡಲು ಇರುವುದೊ ಅಥವಾ ಎಸ್ ಡಿಪಿಐ ಮೇಲೆ ಅಪಪ್ರಚಾರ ನಡೆಸಲು ಇರುವುದೋ ಎಂದು ಶಾಹುಲ್ ಹಮೀದ್ ಸ್ಪಷ್ಟಪಡಿಸಬೇಕು ಎಂದು ಅವರು ಹೇಳಿದರು.

- Advertisement -

ಕಳೆದ ವರ್ಷ ಉಜಿರೆಯಲ್ಲಿ ಸಂಘಪರಿವಾರ ನಾಯಕರ ಕುತಂತ್ರದಿಂದ ಸುಳ್ಳು ಕೇಸಿನಲ್ಲಿ ಅಲ್ಪಸಂಖ್ಯಾತ ಯವಕರನ್ನು ಬಂಧಿಸಿದಾಗ ಅದರ ವಿರುದ್ಧ ಮಾತನಾಡಬೇಕಾದ ಅಲ್ಪಸಂಖ್ಯಾತ ಘಟಕದ ನಾಯಕರು ಬಿಜೆಪಿ ಶಾಸಕರನ್ನು ಓಲೈಸುವ ಸಲುವಾಗಿ ಪತ್ರಿಕಾಗೋಷ್ಠಿ ಕರೆದು ಎಸ್ ಡಿಪಿಐ ಮೇಲೆ ಆರೋಪ ಹೊರಿಸಿದ್ದರೆ. ನಂತರದ ದಿನಗಳಲ್ಲಿ ಜಿಲ್ಲೆಯಲ್ಲಿ ಸಂಘಪರಿವಾರದ ಗೂಂಡಾಗಳು ನಿರಂತರವಾಗಿ ಮುಸ್ಲಿಂ ಸಮುದಾಯದ ಯುವಕರನ್ನು ಗುರಿಪಡಿಸಿ ತ್ರಿಶೂಲ ಹಾಗೂ ತಲವಾರು ಗಳಲ್ಲಿ ದಾಳಿ ನಡೆಸಿದಾಗ ಮೌನವಾಗಿದ್ದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರು ಇದೀಗ ಏಕಾಏಕಿ ಎಸ್ ಡಿಪಿಐ ಮೇಲೆ ಆರೋಪ ಹೊರಿಸಲು ಪತ್ರಿಕಾಗೋಷ್ಠಿ ಕರೆಯುವುದು. ಅವರ ಅಲ್ಪತನವನ್ನು ಎತ್ತಿ ತೋರಿಸುತ್ತದೆ ಎಂದು ಅನ್ವರ್ ಸಾದತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ

ಕಳೆದ 50 ದಿನಗಳಿಂದ ಉಡುಪಿ ಕಾಲೇಜಿನ ವಿಧ್ಯಾರ್ಥಿನಿಯರು ಕಾಲೇಜಿನ ಹೊರಗೆ ತಮ್ಮ ಸಾಂವಿಧಾನಿಕ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದಾಗ ಕಾಂಗ್ರೆಸ್ ನಾಯಕರು ಎಮ್ಮೆ ಮೇಯಿಸುತ್ತಿದ್ದೀರಾ.., ಯಾರಾದರೂ ಹೇಳಿಕೆ ಕೊಟ್ಟರೆ ಕೂಡಲೇ ಅವರಿಂದ ಹೇಳಿಕೆಯನ್ನು ಹಿಂಪಡೆಯಲು ಒತ್ತಡ ಹೇರಿ ಕ್ಷಮೆ ಕೇಳಿಸುವಂತಹ ವಾತಾವರಣ ಸೃಷ್ಟಿಸುವ ಮೂಲಕ ಕಾಂಗ್ರೆಸ್ ಪಕ್ಷ ಸಾಫ್ಟ್ ಹಿಂದುತ್ವವನ್ನು ದಾಟಿ ಹಾರ್ಡ್ ಹಿಂದುತ್ವದ ಕಡೆಗೆ ಸಾಗುತ್ತಿರುವುದು ಸ್ಪಷ್ಟವಾಗುತ್ತಿದೆ. ಕನಿಷ್ಠ ಪಕ್ಷ ಸದನದಲ್ಲಿ ಈ ವಿಚಾರವನ್ನು ಮಂಡಿಸುವ ಎದೆಗಾರಿಕೆ ಇಲ್ಲದ ಕಾಂಗ್ರೆಸ್ ನಾಯಕರು ಎಸ್ ಡಿಪಿಐ ಬಗ್ಗೆ ಮಾತನಾಡುವ ನೈತಿಕತೆ ಹೊಂದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಎಸ್ ಡಿಪಿಐ ಪಕ್ಷಕ್ಕೆ ಯಾವ ವಿಚಾರದ ಬಗ್ಗೆ ಹೋರಾಟ ಮಾಡಬೇಕು, ಯಾವುದರ ಬಗ್ಗೆ ಮಾತನಾಡಬೇಕು ಎಂಬ ಸ್ಪಷ್ಟ ಅರಿವಿದೆ. ಕಳೆದ 13 ವರ್ಷಗಳಿಂದ ಸಂಘಪರಿವಾರವನ್ನು ಯಾವ ರೀತಿ ಎದುರಿಸಿಕೊಂಡು ಬಂದಿದ್ದೇವೆ, ಸಂಘಪರಿವಾರದ ಹಿಡೆನ್ ಅಜೆಂಡಾ ಗಳನ್ನು ಜನರ ಬಳಿಗೆ ಕೊಂಡೊಯ್ದು ಅದನ್ನು ಕಾನೂನಾತ್ಮಕವಾಗಿ ಎದುರಿಸಿದ್ದೇವೆ ಎಂಬುದು ನಾಡಿನ ಪ್ರಜ್ಞಾವಂತ ನಾಗರಿಕರಿಗೆ ಗೊತ್ತಿದೆ. ಬಿಜೆಪಿಯನ್ನು ಜಿಲ್ಲೆಯಲ್ಲಿ ಮತ್ತು ರಾಜ್ಯದಲ್ಲಿ ಬೆಳೆಸುತ್ತಿರುವವರು ಯಾರು ಎಂದು ಅಲ್ಪಸಂಖ್ಯಾತ ಸಮುದಾಯಕ್ಕೆ ಚೆನ್ನಾಗಿ ಗೊತ್ತಿದೆ. ಅಲ್ಪಸಂಖ್ಯಾತ ಹಾಗೂ ದಲಿತ ಸಮುದಾಯವನ್ನು ಕೇವಲ ಓಟ್ ಬ್ಯಾಂಕ್ ಮಾಡಿಕೊಂಡು ಚುನಾವಣೆಯಲ್ಲಿ ಜಯಗಳಿಸಿದ ನಂತರ ಡಝನ್ ಲೆಕ್ಕದಲ್ಲಿ ಬಿಜೆಪಿಗೆ ಬಿಕರಿಯಾಗುತ್ತಿರುವುದು ಕಾಂಗ್ರೆಸ್ ಶಾಸಕರು ಎಂಬುವುದು ನಿಮಗೆ ನೆನಪಿರಲಿ. ನೀವು ಮುಸ್ಲಿಮ್ ಸಮುದಾಯಕ್ಕೆ ವಂಚನೆ ಹಾಗೂ ದ್ರೋಹ ವೆಸಗಿದ ಇತಿಹಾಸ ನಮಗೆ ಚೆನ್ನಾಗಿ ಗೊತ್ತಿದೆ. ಈ ಬಗ್ಗೆ ಬಹಿರಂಗ ಸವಾಲಿಗೆ ಎಸ್ ಡಿಪಿಐ ತಯಾರಾಗಿದೆ. ನಮಗೆ ಕಾಂಗ್ರೆಸ್ ನ ಅಲ್ಪಸಂಖ್ಯಾತ ಘಟಕವೆಂಬ ಅಲ್ಪರಿಂದ ತುಂಬಿ ಹೋಗಿರುವ ಸ್ವಯಂ ಘೋಷಿತ ನಾಯಕರ ಅನುಮತಿ ಅಗತ್ಯವಿಲ್ಲ ಎಂದು ಅನ್ವರ್ ಸಾದತ್ ಬಜತ್ತೂರು ಪತ್ರಿಕಾ ಹೇಳಿಕೆಯ ಮೂಲಕ ಸ್ಪಷ್ಟಪಡಿಸಿದ್ದಾರೆ.



Join Whatsapp