ಪಾಟ್ನಾ: ಕರ್ನಾಟಕದಲ್ಲಿ ಶುರುವಾದ ಹಿಜಾಬ್ ವಿರೋಧಿ ನೀತಿ ಬಿಜೆಪಿ ಆಡಳಿತವಿರುವ ರಾಜ್ಯಗಳಿಗೂ ವ್ಯಾಪಿಸುವ ಸಾಧ್ಯತೆ ಇದೆ ಎಂದು ಚರ್ಚೆಯಾಗುತ್ತಿರುವ ಹೊತ್ತಿನಲ್ಲೇ ಬಿಹಾರದಲ್ಲಿ ಬಿಜೆಪಿ ಜೊತೆ ಸರ್ಕಾರ ನಡೆಸುತ್ತಿರುವ ಸಿಎಂ ನಿತೀಶ್ ಕುಮಾರ್, ಬಿಜೆಪಿಗೆ ಶಾಕ್ ಕೊಟ್ಟಿದ್ದಾರೆ.
ಕೊರೊನಾ ಕಾರಣಕ್ಕೆ ಮಾಸ್ಕ್ ಮೂಲಕ ಮುಖ ಮುಚ್ಚಿಕೊಳ್ಳುವಂತೆ ನಾವೇ ಹೇಳುತ್ತಿದ್ದೇವೆ. ಹೀಗಿರುವಾಗ ಯಾರಾದರೂ ತಲೆ ಮುಚ್ಚಿಕೊಂಡರೆ ಚರ್ಚಿಸುವಂತಹದ್ದು ಏನಿದೆ? ಎಂದು ಅವರು ಪ್ರಶ್ನಿಸಿದ್ದಾರೆ.
ಬಿಹಾರದಲ್ಲಿ ಹಿಜಾಬ್ ವಿವಾದವೇ ಅಲ್ಲ, ಬಿಹಾರದ ಶಾಲೆಗಳಲ್ಲಿ ಒಂದೇ ರೀತಿಯ ಸಮವಸ್ತ್ರ ಧರಿಸುವ ವಿದ್ಯಾರ್ಥಿಗಳಲ್ಲಿ ಯಾರಾದರೂ ತಲೆಗೆ ಏನಾದರೂ ಹಾಕಿದರೆ ಅದರ ಬಗ್ಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ, ನಾವು ಅಂತಹ ವಿಷಯಗಳ ಬಗ್ಗೆ ಗಮನಹರಿಸಬಾರದು ಎಂದು ಪರೋಕ್ಷವಾಗಿ ತನ್ನ ಮಿತ್ರಪಕ್ಷ ಬಿಜೆಪಿಗೆ ಕಿವಿಮಾತು ಹೇಳಿದ್ದಾರೆ.
ನಾವು ಎಲ್ಲರ ಧಾರ್ಮಿಕ ಭಾವನೆಗಳನ್ನು ಗೌರವಿಸುತ್ತೇವೆ, ಜನರ ಧಾರ್ಮಿಕ ಆಚರಣೆ ಅಥವಾ ಸಂಸ್ಕೃತಿಗೆ ಸಂಬಂಧಿಸಿ ನಾವು ಮಧ್ಯಪ್ರವೇಶ ಮಾಡಲ್ಲ ಎಂದು ನಿತೀಶ್ ಹೇಳಿದರು.