ಬೆಂಗಳೂರು: ನನ್ನನ್ನು ಮುಲ್ಲಾ ಎಂದು ಪ್ರತಾಪ್ ಸಿಂಹ ಕರೆದರೆ ನಾನು ಖುಷಿಪಡುತ್ತೇನೆ. ಯಾಕೆಂದರೆ ಈ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ನೂರಾರು ಮುಲ್ಲಾಗಳು ಗಾಂಧೀಜಿಗೆ ಹೆಗಲಾಗಿದ್ದರು. ಹತ್ತಾರು ಮುಲ್ಲಾಗಳು/ಮೌಲ್ವಿಗಳು ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ ಎಂದು ವಿಪಕ್ಷ ಉಪನಾಯಕ ಯು ಟಿ ಖಾದರ್ ಅವರು ಸಂಸದ ಪ್ರತಾಪ್ ಸಿಂಹ ಅವರಿಗೆ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಖಾದರ್, ಈಗ ಇತಿಹಾಸಕ್ಕೆ ಬರೋಣಾ. ಈಗೇನಾದರೂ ಸಾವರ್ಕರ್ ಬದುಕಿದ್ದರೆ ಮೈಸೂರು ರೈಲಿಗೆ ಟಿಪ್ಪು ಎಕ್ಸ್ ಪ್ರೆಸ್ ಎಂದು ಹೆಸರು ಇರಬೇಕು ಎಂಬುದನ್ನು ನನ್ನಂತೆ ಅವರೂ ಪ್ರತಿಪಾದಿಸುತ್ತಿದ್ದರು. “ಈ ದೇಶಕ್ಕೆ ಬ್ರಿಟೀಷರಿಂದ ಅಪಾಯ ಇದೆ ಎಂಬುದನ್ನು ಮೊದಲು ಅರಿತವರೇ ಹೈದರಾಲಿ ಮತ್ತು ಟಿಪ್ಪು” ಎಂದು ಸಾವರ್ಕರ್ ಹೇಳುತ್ತಾರೆ. ( ಪುಸ್ತಕ : ದಿ ಇಂಡಿಯನ್ ವಾರ್ ಆಫ್ ಇಂಡಿಪೆಂಡೆನ್ಸ್ 1857- ಲೇಖಕರು : ಸಾವರ್ಕರ್)
ಅದೇ ಪುಸ್ತಕದಲ್ಲಿ ಸಾವರ್ಕಲ್ ಮುಲ್ಲಾಗಳ ಬಗ್ಗೆಯೂ ಬರೆಯುತ್ತಾರೆ. “ಮುಲ್ಲಾಗಳು ಬೋಧಿಸಿದ, ಬ್ರಾಹ್ಮಣರು ಆಶೀರ್ವಾದಿಸಿದ ದೆಹಲಿಯ ಮಸೀದಿಗಳು ಮತ್ತು ಬನಾರಸ್ ದೇವಸ್ಥಾನಗಳಿಂದ ಪ್ರಾರ್ಥನೆ ಮತ್ತು ತತ್ವಗಳು ಯಾವುದು ? ಅದೇ ಸ್ವಧರ್ಮ ಮತ್ತು ಸ್ವರಾಜ್” ಎಂದು ಬರೆಯುತ್ತಾರೆ.
ನಾನೇನೋ ಉಲ್ಲಾಳದ ಮುಲ್ಲಾ. ಬುದ್ದಿವಂತ ಸಂಸದರಾಗಿರುವ ಪ್ರತಾಪ್ ಸಿಂಹ ಅವರು ಸಾವರ್ಕರ್ ಅವರನ್ನು ಒಪ್ಪುತ್ತಾರೋ ಇಲ್ಲವೋ ಹೇಳಲಿ ಎಂದು ಖಾದರ್ ಪ್ರಶ್ನಿಸಿದ್ದಾರೆ.