ಅಹಮದಾಬಾದ್: ಸರಣಿ ಸ್ಫೋಟದ ಸುಳ್ಳು ಪ್ರಕರಣದಲ್ಲಿ ಬಂಧಿತ ಮಂಝರ್ ಇಮಾಮ್ ನಿರಪರಾಧಿ ಎಂದು ಬಿಡುಗಡೆಯಾಗಿದ್ದು, ನನ್ನ ಮಗ ಅಮೂಲ್ಯ 13 ವರ್ಷಗಳನ್ನು ಕಳೆದು ಕೊಂಡಿದ್ದಾನೆ ಎಂದು ಆತನ ತಾಯಿ ಜಾರ್ಖಂಡ್ ಮೂಲದ ಝಾಹಿದಾ ಖಾತುಮ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
13 ವರ್ಷಗಳ ವಿಚಾರಣೆಯ ಬಳಿಕ ಅಹಮದಾಬಾದ್ ವಿಶೇಷ ನ್ಯಾಯಾಲಯವು 49 ಮಂದಿಯನ್ನು ದೋಷಿ ಮತ್ತು 28 ಜನರನ್ನು ಖುಲಾಸೆಗೊಳಿಸಿದ ಹಿನ್ನೆಲೆಯಲ್ಲಿ ಆತನ ತಾಯಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಿದ್ದರು.
ಸದ್ಯ ಝಾಹಿದಾ ಖಾತುನ್ ಅವರ ಮಗ ಮಂಝರ್ ಇಮಾಮ್ 13 ವರ್ಷಗಳ ದೀರ್ಘಕಾಲವನ್ನು ಜೈಲಿನಲ್ಲಿ ಕಳೆದರು ಮತ್ತು ಆತನ ವಿರುದ್ಧ ಕರಾಳ UAPA ಕಾಯ್ದೆ ಮತ್ತು ಐಪಿಸಿ ಸೆಕ್ಷನ್ ಅಡಿಯಲ್ಲಿ ಕೊಲೆ, ಕೊಲೆಯತ್ನ ಮತ್ತು ಕ್ರಿಮಿನಲ್ ಸಂಚು ಸೇರಿದಂತೆ ಹಲವಾರು ಆರೋಪ ಹೊರಿಸಿ ಜೈಲಿನಲ್ಲಿರಿಸಲಾಗಿತ್ತು.
ತನ್ನ ಮಗನ ಬಂಧನದ ಆಘಾತದಿಂದಾಗಿ ಹೊರ ಬಾರದ ನನ್ನ ಗಂಡ ಒಂದು ವರ್ಷದ ಬಳಿಕ ನಿಧನರಾದರು ಎಂದು ಖಾತುನ್ ತನ್ನ ಅಳಲನ್ನು ಮಾಧ್ಯಮದ ಮುಂದೆ ತೋಡಿಕೊಂಡಿದ್ದಾರೆ.
2007 ರಲ್ಲಿ ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕ ವಿಜೇತರಾದ ಮಂಝರ್ ಇಮಾಮ್ ಅವರು ಬಳಿಕ ರಾಂಚಿ ಯುನಿವರ್ಸಿಟಿಯಲ್ಲಿ ಉರ್ದು ಭಾಷೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದರು.