ಸ್ಕಾರ್ಫ್ ನಿಷೇಧ ವಿರುದ್ಧ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿದ ಹೈಕೋರ್ಟ್

Prasthutha|

ಬೆಂಗಳೂರು: ಉಡುಪಿಯ ಸರ್ಕಾರಿ ಪಿಯು ಕಾಲೇಜು ಮತ್ತು ಕುಂದಾಪುರದ ಭಂಡಾರ್ಕರ್ ಕಲಾ ಹಾಗೂ ವಿಜ್ಞಾನ ಕಾಲೇಜಿನ ಮುಸ್ಲಿಮ್ ಸಮುದಾಯದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಹಾಜರಾಗುವುದಕ್ಕೆ ಅಡ್ಡಿ ಪಡಿಸುತ್ತಿರುವ ಪ್ರಕರಣದ ಸಂಬಂಧ ಸಲ್ಲಿಸಿರುವ ಪ್ರತ್ಯೇಕ ಮನವಿಗಳ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.

- Advertisement -


ಏಕ ಸದಸ್ಯ ಪೀಠದ ನ್ಯಾಯಮೂರ್ತಿ ದೀಕ್ಷಿತ್ ಆರಂಭದಲ್ಲಿ ಅರ್ಜಿಯ ವಿಚಾರಣೆ ಆರಂಭಿಸಿ, ಎಲ್ಲ ರೀತಿಯ ಭಾವನೆಗಳನ್ನು ಬದಿಗೆ ಸರಿಸೋಣ. ಸಂವಿಧಾನದ ಮೇಲೆ ನಾನು ತೆಗೆದುಕೊಂಡಿರುವ ಪ್ರಮಾಣದಂತೆ ನಡೆದುಕೊಳ್ಳಲಿದ್ದೇನೆ. ಬೇರೆಲ್ಲಾ ಪ್ರಶ್ನೆಗಳನ್ನು ಹೊರಗಿರಿಸಿ, ಸಂವಿಧಾನ ಏನು ಹೇಳುತ್ತದೆಯೋ ಅದರಂತೆ ನಡೆಯೋಣ. ಸಂವಿಧಾನವು ನನಗೆ ಭಗವದ್ಗೀತೆಗಿಂತ ಹೆಚ್ಚು ಎಂದು ಹೇಳಿದರು.


ಹಿರಿಯ ವಕೀಲ ದೇವದತ್ ಕಾಮತ್ ಅರ್ಜಿದಾರರ ಪರ ವಾದ ಮಂಡಿಸಿ, ಹಿಜಾಬ್ ಧರಿಸುವುದು ಇಸ್ಲಾಮ್ ಧರ್ಮದ ಸಂಪ್ರದಾಯ. ನಮ್ಮ ಮೊದಲ ಕೋರಿಕೆ, ಶಿರವಸ್ತ್ರ ಅಥವಾ ಹಿಜಾಬ್ ಧರಿಸುವುದು. ಪವಿತ್ರ ಕುರಾನ್ ಪ್ರಕಾರ ಇದು ಇಸ್ಲಾಂ ಧರ್ಮದ ಅಗತ್ಯ ಭಾಗವಾಗಿದೆ ಎಂದು ಹೇಳಿದರು.

- Advertisement -


ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರನ್ನು ಕಾಲೇಜಿನ ಪ್ರತ್ಯೇಕ ಕೊಠಡಿಯಲ್ಲಿ ಕುಳ್ಳಿರಿಸಲಾಗಿದೆ. ಇದು ಧಾರ್ಮಿಕ ತಾರತಮ್ಯದ ವಿಧಾನವಾಗಿದೆ. ಧಾರ್ಮಿಕ ಚಟುವಟಿಕೆಗಳಿಂದ ಸರಕಾರ ದೂರು ಇರುವ ಬೇರೆ ದೇಶಗಳಲ್ಲಿನ ಜಾತ್ಯತೀತವಾದವನ್ನು ನಾವು ಪಾಲಿಸುವುದಿಲ್ಲ. ನಮ್ಮಲ್ಲಿ ವಿದ್ಯಾರ್ಥಿಗಳು ನಾಮ ಹಾಕಿಕೊಳ್ಳಲು, ಹಿಜಾಬ್ ಧರಿಸಲು ಅವಕಾಶವಿದೆ. ವಿದ್ಯಾರ್ಥಿನಿಯರು ತಮ್ಮ ಧಾರ್ಮಿಕ ಆಚರಣೆಯನ್ನು ಮನೆಗೆ ಏಕೆ ಸೀಮಿತಗೊಳಿಸಬಾರದು ಎಂಬ ವಾದವಿರಬಹುದು. ಭಾರತದಲ್ಲಿ ಜಾತ್ಯತೀತತೆ ಭಿನ್ನವಾಗಿದೆ. ನಾವು ಸಕಾರಾತ್ಮಕವಾದ ಜಾತ್ಯತೀತವಾದವನ್ನು ಅನುಸರಿಸುತ್ತಿದ್ದೇವೆ ಎಂದರು.


ಮೂಲಭೂತ ಹಕ್ಕುಗಳನ್ನು ಚಲಾಯಿಸಲು ಸರ್ಕಾರ ಕ್ರಮಕೈಗೊಳ್ಳಬೇಕು. ಅವುಗಳನ್ನು ಕಡಿತ ಮಾಡಲು ಅಲ್ಲ. ಗೂಂಡಾಗಳು ಅಡ್ಡಿಪಡಿಸುತ್ತಿದ್ದರೆ, ಹೆಣ್ಣು ಮಕ್ಕಳು ತಮ್ಮ ಹಕ್ಕನ್ನು ಚಲಾಯಿಸಲು ಸರ್ಕಾರ ಕ್ರಮವಹಿಸಬೇಕು. ಕಾನೂನು ಸುವ್ಯವಸ್ಥೆಯ ನೆಪವೊಡ್ಡಿ ಜನರ ಮೂಲಭೂತ ಹಕ್ಕನ್ನು ಸರ್ಕಾರ ಕಸಿಯಲಾಗದು ಎಂದು ಸುಪ್ರೀಂ ಕೋರ್ಟ್ ತೀರ್ಪು ಉಲ್ಲೇಖಿಸಿ ಕಾಮತ್ ವಾದ ಮಂಡಿಸಿದರು.


ಕಾನೂನು, ಸುವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂದು ಸರ್ಕಾರ ಹೇಳುವುದು ಸಾಲದು. ನಮ್ಮ ಧಾರ್ಮಿಕ ನಂಬಿಕೆಯನ್ನು ಪಾಲಿಸುತ್ತಿದ್ದು, ಹಿಜಾಬ್ ಧರಿಸಿ ಕಾಲೇಜಿಗೆ ಹೋಗುತ್ತಿದ್ದೇವೆ. ಇದಕ್ಕೆ ಕಾನೂನು ಸುವ್ಯವಸ್ಥೆಯ ಬಣ್ಣ ಕೊಡುವುದು ಚಕ್ಕಡಿಯ ಹಿಂದೆ ದನವನ್ನು ಹೂಡಿದಂತೆ ಎಂದರು.

ನಾನು ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದು, ನನ್ನ ಪುತ್ರ ನಾಮ ಹಾಕಿಕೊಂಡು ಶಾಲೆಗೆ ಹೋಗುತ್ತಾನೆ. ಇದನ್ನು ಉಲ್ಲೇಖಿಸಿ ಶಾಲೆಯು ಇದು ಕಾನೂನು ಸುವ್ಯವಸ್ಥೆಗೆ ಸಮಸ್ಯೆಯಾಗುತ್ತದೆ ಎಂದು ಹೇಳಬಹುದೇ. ಅರ್ಜಿದಾರರು ಹಿಜಾಬ್ ಧರಿಸಿದ್ದು, ಅವರು ಯಾರಿಗೂ ಸಮಸ್ಯೆ ಉಂಟು ಮಾಡುತ್ತಿಲ್ಲ ಎಂದು ಕಾಮತ್ ಹೇಳಿದರು.


ಹಿಜಾಬ್ ಕಾನೂನು ವ್ಯವಸ್ಥೆಯ ವಿಷಯವೇ ಆದರೆ ಅವರು ಹಿಜಾಬ್ ಧರಿಸಿ ಶಾಲೆಗೆ ಬರುವಾಗ ಮಾತ್ರವೇ ಏಕೆ ಸಮಸ್ಯೆಯಾಗುತ್ತದೆ. ಹೊರಗಡೆ ಇರುವಾಗ ಏಕೆ ಸಮಸ್ಯೆಯಾಗುವುದಿಲ್ಲ ಎಂದು ಪ್ರಶ್ನಿಸಿದ ವಕೀಲರು, ಯಾವುದೇ ಧಾರ್ಮಿಕ ಆಚರಣೆಗಳಿಗೆ ಸಂಬಂಧಿಸಿದಂತೆ ಸರ್ಕಾರವು ಕಾನೂನು ಸುವ್ಯವಸ್ಥೆ ಎಂದು ಹೇಳಬಹುದು. ಕಾನೂನು ಸುವ್ಯವಸ್ಥೆ ನೆಪವೊಡ್ಡಿ ಸರ್ಕಾರವು ಎಲ್ಲಾ ಧಾರ್ಮಿಕ ಆಚರಣೆಗಳನ್ನು ನಿಲ್ಲಿಸಬಹುದು. ಜೊಳ್ಳಿನಿಂದ ಕಾಳನ್ನು ಬೇರ್ಪಡಿಸುವುದನ್ನು ನ್ಯಾಯಾಲಯ ಮಾಡಬೇಕು ಎಂದು ಮನವಿ ಮಾಡಿದರು.


ವೈಯಕ್ತಿಕವಾಗಿ ಹೇಳಬೇಕೆಂದರೆ ಮಕ್ಕಳು ತಮ್ಮ ತಲೆ ಮುಚ್ಚಿಕೊಳ್ಳುವುದಕ್ಕೆ ಸಂಬಂಧಿಸಿದ ನಿಲುವಿಗೆ ನನ್ನ ಬೆಂಬಲ ಇಲ್ಲದಿರಬಹುದು. ಆದರೆ, ನಾವು ಮತ್ತೊಬ್ಬರ ನಿರ್ಧಾರದಲ್ಲಿ ತೀರ್ಪು ನೀಡಲು ಕೂರಲಾಗದು ಎಂದು ನ್ಯಾಯಾಲಯಗಳು ಹೇಳಿವೆ ಎಂದರು.
ಕರ್ನಾಟಕ ಸರ್ಕಾರದ ಆದೇಶವನ್ನು ಮದ್ರಾಸ್ ಹೈಕೋರ್ಟ್ ತೀರ್ಪು ಆಧರಿಸಿ ಹೊರಡಿಸಲಾಗಿದ್ದು, ಇದು ಸಂವಿಧಾನದ 25ನೇ ವಿಧಿಗೆ ಸಂಬಂಧಿಸಿದ್ದಲ್ಲ. ಇದನ್ನು ಹಿಜಾಬ್ ನಿಷೇಧಕ್ಕೆ ಬಳಸಲಾಗದು. ಕೇರಳ ಹೈಕೋರ್ಟ್ ತೀರ್ಪು ಖಾಸಗಿ ಅಲ್ಪಸಂಖ್ಯಾತ ಸಂಸ್ಥೆಗೆ ಸೀಮಿತವಾಗಿದ್ದು, ಅದು ಸರ್ಕಾರಿ ಸಂಸ್ಥೆಯಾಗಿರಲಿಲ್ಲ. ಹೀಗಾಗಿ, ಕೇರಳ ಹೈಕೋರ್ಟ್ ತೀರ್ಪು ಇಲ್ಲಿಗೆ ಅನ್ವಯಿಸದು ಎಂದು ಕಾಮತ್ ವಾದ ಮಂಡಿಸಿದರು.

಻ಅಂತಿಮವಾಗಿ, ಸಾರ್ವಜನಿಕರಿಗೆ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡುವಂತೆ ವಿನಂತಿಸಿದ ನ್ಯಾಯಮೂರ್ತಿ, ಜನರ ಬುದ್ಧಿವಂತಿಕೆ ಮತ್ತು ಸದ್ಗುಣದಲ್ಲಿ ಸಂಪೂರ್ಣ ನಂಬಿಕೆಯನ್ನು ಹೊಂದಿದ್ದೇವೆ. ಜನರು ಅದನ್ನು ಆಚರಣೆಗೆ ತರುತ್ತಾರೆ ಎಂದು ಭಾವಿಸಿರುವುದಾಗಿ ಹೇಳಿ ವಿಚಾರಣೆಯನ್ನು ನಾಳೆಗೆ ಮುಂದೂಡಿದರು.



Join Whatsapp