ಹಿಜಾಬ್ ವಿವಾದದ ಹಿಂದೆ ಮುಸ್ಲಿಮ್ ಮಹಿಳೆಯರ ಘನತೆಗೆ ಧಕ್ಕೆ ತರುವ ಸಂಘಟಿತ ಸಂಚು: ಕ್ಯಾಂಪಸ್ ಫ್ರಂಟ್

Prasthutha|

ನವದೆಹಲಿ: ಹಿಜಾಬ್ ವಿವಾದದ ಹಿಂದೆ ಮುಸ್ಲಿಮ್ ಮಹಿಳೆಯರ ಘನತೆಗೆ ಧಕ್ಕೆ ತರುವ ಸಂಘಟಿತ ಸಂಚು ಸಂಘಪರಿವಾರದಿಂದ ರಾಷ್ಟ್ರವ್ಯಾಪಿ ನಡೆಯುತ್ತಿದೆ. ವಿವಿಧ ರಾಜ್ಯಗಳಲ್ಲಿ ಮುಸ್ಲಿಮರ ವಿರುದ್ಧ ದಾಳಿಗಳು ನಡೆದಿವೆ ಮತ್ತು ಅದಕ್ಕೆ ಸಂಬಂಧಿಸಿದ ವ್ಯಕ್ತಿಗಳು ಮತ್ತು ಸರ್ಕಾರ ಮತ್ತು ಪೊಲೀಸರ ಪ್ರತಿಕ್ರಿಯೆಯು ಅನುಮಾನವನ್ನು ಇನ್ನಷ್ಟು ಬಲಪಡಿಸುತ್ತಿದೆ ಎಂದು ಕ್ಯಾಂಪಸ್ ಫ್ರಂಟ್ ರಾಷ್ಟ್ರೀಯ ಸಮಿತಿ ಸದಸ್ಯೆ ಕೆ.ಪಿ ಫಾತಿಮಾ ಶೆರಿನ್ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸ್ಲಿಂ ಮಹಿಳಾ ಹೋರಾಟಗಾರ್ತಿಯರನ್ನು ಆನ್ಲೈನ್ ವೇದಿಕೆಗಳಲ್ಲಿ ಹರಾಜು ಹಾಕುವುದು, ಕರ್ನಾಟಕ ಮತ್ತು ಕೇರಳದಲ್ಲಿ ಮುಸ್ಲಿಂ ವಿದ್ಯಾರ್ಥಿಗಳ ಮೂಲಭೂತ ಹಕ್ಕುಗಳನ್ನು ನಿರಾಕರಿಸುವುದು ದೊಡ್ಡ ಪಿತೂರಿಯ ಭಾಗವಾಗಿದೆ. ಆನ್ ಲೈನ್ ಹರಾಜಿನ ಸಂಚುಕೋರರು ಕರ್ನಾಟಕ, ಮಹಾರಾಷ್ಟ್ರ, ದೆಹಲಿ, ಮಧ್ಯಪ್ರದೇಶ ಮತ್ತು ಉತ್ತರಾಖಂಡಕ್ಕೆ ಸೇರಿದವರು. ಇದು ಈ ಗಂಭೀರ ಅಪರಾಧದ ಹಿಂದಿನ ಸಂಘಟಿತ ಜಾಲವನ್ನು ಸಾಬೀತುಪಡಿಸುತ್ತದೆ. ಮಹಾರಾಷ್ಟ್ರ ಪೊಲೀಸರು ಪಿತೂರಿಯಲ್ಲಿ ಭಾಗಿಯಾಗಿದ್ದ ಕೆಲವರನ್ನು ಬಂಧಿಸುವವರೆಗೂ ಈ ಗಂಭೀರ ಅಪರಾಧದ ವಿರುದ್ಧ ಪೊಲೀಸರು ನಿಷ್ಕ್ರಿಯರಾಗಿದ್ದರು. ಬಂಧಿತರೆಲ್ಲರೂ ರಾಜ್ಯಗಳನ್ನು ಮೀರಿ ಹಿಂದುತ್ವ ಸಂಪರ್ಕ ಹೊಂದಿದ್ದಾರೆ ಎಂದು ಅವರು ತಿಳಿಸಿದರು.
ಉಡುಪಿ ಕಾಲೇಜಿನಲ್ಲಿ ಏಕಾಏಕಿ ಪ್ರಾಂಶುಪಾಲರು ಶಿರವಸ್ತ್ರ ತೆಗೆಯುವಂತೆ ಆದೇಶಿಸಿದ್ದು ಕಾಲೇಜು ಆಡಳಿತ ಮಂಡಳಿಯ ಮುಖ್ಯಸ್ಥರು ಬಿಜೆಪಿ ಶಾಸಕರಾಗಿರುವುದರಿಂದ ಬಿಜೆಪಿಯ ಒತ್ತಡದಿಂದ ಈ ರೀತಿ ಮಾಡಲಾಗಿದೆ. ಈ ಘಟನೆಯ ಮೊದಲು ಮುಸ್ಲಿಂ ಹುಡುಗಿಯರು ದೀರ್ಘಕಾಲದವರೆಗೆ ಹಿಜಾಬ್ ಧಾರಣೆ ಯಾವುದೇ ಸಮಸ್ಯೆಯನ್ನು ಸೃಷ್ಟಿಸಲಿಲ್ಲ. ಹುಡುಗಿಯರು ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾಗುವುದನ್ನು ವಿರೋಧಿಸಿ ಸಂಘಪರಿವಾರದಿಂದ ಪ್ರೇರಣೆಗೊಂಡ ಯುವಕರ ಗುಂಪು ಕೇಸರಿ ಶಾಲು ಧರಿಸಿ ಕಾಲೇಜಿಗೆ ಪ್ರವೇಶಿದ್ದನ್ನು ನಾವು ಕಂಡಿದ್ದೇವೆ. ಈಗ ಅದೇ ತಂತ್ರವನ್ನು ಬಲಪಂಥೀಯ ಹಿಂದುತ್ವವಾದಿಗಳು ಇತರ ಕಾಲೇಜುಗಳಿಗೆ ಪಸರಿಸುತ್ತಿದ್ದಾರೆ. ಇದು ಮುಸ್ಲಿಂ ಮಹಿಳೆಯರನ್ನು ಅಮಾನವೀಯವಾಗಿಸಲು ಮತ್ತು ಅವರ ಧಾರ್ಮಿಕ ಗುರುತನ್ನು ದೂಷಿಸಲು ಸಂಘಟಿತ ಮತ್ತು ವ್ಯವಸ್ಥಿತ ಪಿತೂರಿ ಎಂಬುದರಲ್ಲಿ ಎರಡು ಮಾತಿಲ್ಲ. ಸಾಂವಿಧಾನಿಕ ಮೂಲಭೂತ ಹಕ್ಕುಗಳನ್ನು ನಿರಾಕರಿಸುವಲ್ಲಿ ಕಾಲೇಜು ಪ್ರಾಂಶುಪಾಲರು ತೊಡಗಿಸಿಕೊಂಡಿರುವುದು ನಿರಾಶೆಯ ವಿಷಯವಾಗಿದ್ದು ಅದು ದ್ವೇಷ ಪಸರಿಸುವವರಿಗೆ ಮಾತ್ರ ಒಳಿತಾಗಿರುವ ವಿಷಯವಾಗಿದೆ. ಈ ಸಮಸ್ಯೆಗಳ ನ್ಯಾಯಯುತ ತನಿಖೆ ಮತ್ತು ಈ ಷಡ್ಯಂತ್ರದ ಹಿಂದಿರುವ ವ್ಯಕ್ತಿಗಳನ್ನು ಬಂಧಿಸುವಂತೆ ನಾವು ಒತ್ತಾಯಿಸುತ್ತಿದ್ದೇವೆ. ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸಲು ಹೋರಾಡುತ್ತಿರುವ ವಿದ್ಯಾರ್ಥಿಗಳಿಗೆ ಒಗ್ಗಟ್ಟನ್ನು ವ್ಯಕ್ತಪಡಿಸಲು ನಾವು ಎಲ್ಲಾ ಪ್ರಬುಧ್ಧ ನಾಗರಿಕರಲ್ಲಿ ಮನವಿ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.
ಕ್ಯಾಂಪಸ್ ಫ್ರಂಟ್ ಕೇರಳ ರಾಜ್ಯ ಉಪಾಧ್ಯಕ್ಷೆ ಝೀಬಾ ಶಿರೀನ್, ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ಆಯಿಶಾ ಮುರ್ಷಿದಾ, ಫಾತಿಮಾ ಉಸ್ಮಾನ್, ಬೆಂಗಳೂರು ಜಿಲ್ಲಾ ನಾಯಕಿ ಮುದಶ್ಶಿರ ಉಪಸ್ಥಿತರಿದ್ದರು.



Join Whatsapp