ರಾಜ್ಯ ಮಹಿಳಾ ಹಾಕಿ ತಂಡದ ಮಾಜಿ ನಾಯಕಿ ಮಾರ್ಗರೇಟ್ ಆಸ್ತಿ ಕಬಳಿಕೆ ಯತ್ನ: ದೂರು ದಾಖಲು

Prasthutha|

ಬೆಂಗಳೂರು: ರಾಜ್ಯ ಮಹಿಳಾ ಹಾಕಿ ತಂಡದ ನಾಯಕಿಯಾಗಿದ್ದ ಮಾರ್ಗರೇಟ್ ಲೂಯಿಸ್ ಅವರನ್ನು ಅಕ್ರಮವಾಗಿ ಕೂಡಿ ಹಾಕಿ ಬೆದರಿಸಿ ದಾಖಲಾತಿಗಳಿಗೆ ಸಹಿ ಹಾಕಿಸಿಕೊಂಡು ಕೋಟ್ಯಂತರ ರೂ. ಮೌಲ್ಯದ ಆಸ್ತಿ ಕಬಳಿಸಿರುವ ಸಂಬಂಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

- Advertisement -

ಬಾಗಲೂರು ವಿಲೇಜ್ ನ ಬಳಿ 2 ಎಕರೆ 17 ಗುಂಟೆ ಜಮೀನಿದ್ದು ಅದನ್ನು ಕಬಳಿಸುವ ಉದ್ದೇಶದಿಂದ 15 ಮಂದಿ ಸೇರಿಕೊಂಡು ಒಂಟಿಯಾಗಿದ್ದ  ಸುಮಾರು 74 ವರ್ಷ ವಯಸ್ಸಿನ ಮಾರ್ಗರೇಟ್ ಲೂಯಿಸ್ ಅವರನ್ನು ಹಲವು ದಿನಗಳ ಕಾಲ ಕೂಡಿ ಹಾಕಿ ಬೆದರಿಸಿ ಜಿಪಿಎ ತಯಾರಿಸಿ ಕಬಳಿಸಲು ಯತ್ನಿಸಿದ್ದು ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.

ಮಾರ್ಗರೇಟ್ ಲೂಯಿಸ್ ಅವರನ್ನು ಬೆದರಿಸಿ ಕೆಲವು ಚೆಕ್ ಗಳಿಗೆ ಸಹಿಹಾಕಿಸಿಕೊಂಡು ಪ್ರೀತಿಯಿಂದ ಸಾಕಿರುವ ನಾಯಿಗಳನ್ನು ಕೊಲ್ಲುವುದಾಗಿ ಬೆದರಿಸಿ ಹಿಂಸಿಸಿ 15 ಮಂದಿ ಈ ಕೃತ್ಯವೆಸಗಿದ್ದು, ಈ ಸಂಬಂಧಿಸಿದಂತೆ ಪೊಲೀಸರು ವಿಸ್ತೃತ ತನಿಖೆಯನ್ನು ಕೈಗೊಂಡಿದ್ದಾರೆ.

- Advertisement -

ಮಾರ್ಗರೇಟ್ ಲೂಯಿಸ್ ಅವರ ಆಸ್ತಿಯನ್ನು ಓರ್ವ ವ್ಯಕ್ತಿಯ ಹೆಸರಿಗೆ ಜಿಪಿಎ ಮಾಡಿಸಿಕೊಂಡು ಅದರ ಆಧಾರದಲ್ಲಿ ನೋಂದಣಿ ಮಾಡಿಸಿಕೊಳ್ಳಲು 15 ಮಂದಿಯು ಯತ್ನಿಸಿದ್ದು ಸಾಕ್ಷಾಧಾರಗಳನ್ನು ಪರಿಶೀಲನೆ ನಡೆಸಿ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮಾರ್ಗರೇಟ್ ಲೂಯಿಸ್ 1965 ರಲ್ಲಿ ಲಖನೌ ನಲ್ಲಿ ನಡೆದ ಜೂನಿಯರ್ ನ್ಯಾಷನಲ್ಸ್ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು. ಹಿರಿಯ ರಾಷ್ಟ್ರೀಯ ಮಹಿಳಾ ಹಾಕಿ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು.

ಸತತ 7 ವರ್ಷಗಳ ಕಾಲ ರಾಷ್ಟ್ರೀಯ ಚಾಂಪಿಯನ್ ಶಿಪ್ ಗೆದ್ದಿದ್ದು ಒಂದೆರಡು ವರ್ಷಗಳ ಕಾಲ ರಾಜ್ಯ ಮಹಿಳಾ ಹಾಕಿ ತಂಡದ ನಾಯಕಿಯಾಗಿ 1972 ರಲ್ಲಿ ಗಗನಸಖಿಯಾಗಿ ಇಂಡಿಯನ್ ಏರ್ಲೈನ್ಸ್ಗೆ ಸೇರಿ ಹಾಕಿಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದರು.

ಬಳಿಕ ಅಥ್ಲೆಟಿಕ್ಸ್ ಗೆ ಪ್ರವೇಶಗೈದು ಕಂಠೀರವ ಕ್ರೀಡಾಂಗಣದಲ್ಲಿ 2 ವರ್ಷಗಳ ಕಾಲ ಜಾವೆಲಿನ್ ಥ್ರೋನಲ್ಲಿ ಕರ್ನಾಟಕ ರಾಜ್ಯ ದಾಖಲೆಯನ್ನು ಮುರಿದು 21 ವರ್ಷಗಳ ಕಾಲ ಹಿರಿಯ ಗಗನಸಖಿಯಾಗಿ ಇಂಡಿಯನ್ ಏರ್ಲೈನ್ಸ್ನಲ್ಲಿ ಕೆಲಸ ಮಾಡಿ ಗಳಿಸಿದ ಬಹುತೇಕ ಆಸ್ತಿಯನ್ನು ಕಬಳಿಸುವ ಯತ್ನ ನಡೆದಿದೆ ಎಂದು ತಿಳಿದುಬಂದಿದೆ.

 ಹಲವು ದಿನಗಳ ಕಾಲ ಕೂಡಿ ಹಾಕಿ ಬೆದರಿಸಿ ಜಿಪಿಎ ತಯಾರಿಸಿ ಆಸ್ತಿ ಕಬಳಿಸಲು ಯತ್ನಿಸಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡುವಂತೆ ಮಾರ್ಗರೇಟ್ ಅವರು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದ್ದಾರೆ.

ಕ್ರೀಡೆಯಲ್ಲಿ ರಾಜ್ಯಕ್ಕೆ ಖ್ಯಾತಿ ತಂದುಕೊಟ್ಟಿರುವ ನನಗೆ ಕಿರುಕುಳ ನೀಡಿ ವೃದ್ಧಾಪ್ಯದ ವೇಳೆ ಹಿಂಸೆ ನೀಡಿರುವ ಆರೋಪಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಮನವಿ ಮಾಡಿದ್ದಾರೆ.



Join Whatsapp