ಬೆಂಗಳೂರು: ನಮ್ಮ ಪಕ್ಷಕ್ಕೆ ಯಾರೇ ಸೇರ್ಪಡೆಯಾಗಬೇಕಾದರೂ ಪಕ್ಷದ ಮಾಜಿ ಅಧ್ಯಕ್ಷರಾದ ಅಲ್ಲಂ ವೀರಭದ್ರಪ್ಪ ಅವರ ನೇತೃತ್ವದ ಸಮಿತಿಗೆ ಅರ್ಜಿ ಹಾಕಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಅನ್ಯಪಕ್ಷಗಳ ಮುಖಂಡರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚುನಾವಣೆ ಅಥವಾ ತುರ್ತು ಸಂದರ್ಭಗಳಲ್ಲಿ ಪಕ್ಷ ಸೇರ್ಪಡೆ ಅನಿವಾರ್ಯವಾದಾಗ ಮಾತ್ರ ನಾವು ನಿರ್ಧಾರ ಕೈಗೊಳ್ಳುತ್ತೇವೆ. ಉಳಿದ ಸಂದರ್ಭಗಳಲ್ಲಿ ಸಮಿತಿ ಅನುಮತಿ ಕೊಟ್ಟ ನಂತರ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಕರಾವಳಿ, ಮಲೆನಾಡು ಪ್ರದೇಶದಲ್ಲಿ ಯಾವ ರೀತಿ ಉದ್ಯೋಗ ಸೃಷ್ಟಿ ಮಾಡಬೇಕು, ಜನರು ವಲಸೆ ಹೋಗುವುದನ್ನು ತಪ್ಪಿಸಲು ಯಾವ ಕಾರ್ಯಕ್ರಮ ರೂಪಿಸಬೇಕು ಎಂಬುದರ ಬಗ್ಗೆ ಕೆಲವರಿಗೆ ಜವಾಬ್ದಾರಿ ನೀಡಿದ್ದೇನೆ. ನಮ್ಮಲ್ಲಿರುವ ಪ್ರಾಕೃತಿಕ ಸಂಪತ್ತು, ಯುವ ಶಕ್ತಿಯನ್ನು ನಾವು ಬೇರೆಯವರಿಗೆ ದಾನ ಮಾಡುತ್ತಿದ್ದೇವೆ. ನಮ್ಮವರು ಬೇರೆ ರಾಜ್ಯಗಳಿಗೆ ವಲಸೆ ಹೋಗುವ ಅಗತ್ಯವಿಲ್ಲ ಎಂದು ಕಿವಿ ಮಾತು ಹೇಳಿದ್ದಾರೆ.