ನವದೆಹಲಿ: ತಮಿಳುನಾಡು ವಿಧಾನಸಭೆ ಅಂಗೀಕರಿಸಿದ ನೀಟ್ ಮಸೂದೆಯನ್ನು ಸಹಿ ಮಾಡದೆ ಹಿಂದಿರುಗಿಸಿದ ರಾಜ್ಯಪಾಲ ಆರ್.ಎನ್.ರವಿ ಯವರ ನಡೆಯನ್ನು ವಿರೋಧಿಸಿ ವಿರುದ್ಧ ಕಾಂಗ್ರೆಸ್, ಡಿಎಂಕೆ ಮತ್ತು ತೃಣಮೂಲ ಸದಸ್ಯರು ರಾಜ್ಯಸಭೆಯಿಂದ ಹೊರನಡೆದರು. ಡಿಎಂಕೆ ಸಂಸದ ತಿರುಚಿ ಶಿವ ಈ ವಿಷಯವನ್ನು ಸದನದ ಮುಂದೆ ತಂದಾಗ ಉದ್ರಿಕ್ತ ಪಕ್ಷದ ಸದಸ್ಯರು ಪ್ರತಿಭಟಿಸಿದರು. ನೀಟ್ ಮಸೂದೆಯನ್ನು ತಮಿಳುನಾಡು ವಿಧಾನಸಭೆ ಸರ್ವಾನುಮತದಿಂದ ಅಂಗೀಕರಿಸಿದ್ದು ರಾಜ್ಯಪಾಲರು ಸಹಿ ಹಾಕದೆ ಅದನ್ನು ಹಿಂದಕ್ಕೆ ಕಳುಹಿಸಿರುವುದು ತಮಿಳುನಾಡಿನ ಜನರ ಸಾರ್ವಜನಿಕ ಭಾವನೆಗೆ ವಿರುದ್ಧವಾಗಿದೆ ಎಂದು ಡಿಎಂಕೆ ಆರೋಪಿಸಿದೆ.
ಈ ವಿಷಯದ ಬಗ್ಗೆ ಚರ್ಚೆ ನಡೆಸುವಂತೆ ಡಿಎಂಕೆ ಒತ್ತಾಯಿಸಿದರೂ ಅಧ್ಯಕ್ಷ ವೆಂಕಯ್ಯ ನಾಯ್ಡು ಅನುಮತಿ ನಿರಾಕರಿಸಿ ಶೂನ್ಯ ವೇಳೆಯಲ್ಲಿ ಮಾತನಾಡುವಂತೆ ಸೂಚಿಸಿದರು. ಲೋಕಸಭೆಯಲ್ಲಿಯೂ ಇದೇ ರೀತಿಯ ಪ್ರತಿಭಟನೆ ನಡೆಸಲಾಯಿತು. ನೀಟ್ ಮಸೂದೆಯು ದ್ವಿತೀಯ ಪಿಯುಸಿಯ ಪರೀಕ್ಷೆಗಳಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ವೈದ್ಯಕೀಯ ಪ್ರವೇಶವನ್ನು ಮಾಡುವ ಗುರಿಯನ್ನು ಹೊಂದಿದೆ.ಆದರೆ ರಾಜ್ಯಪಾಲರು ಮಸೂದೆಯು ವಿದ್ಯಾರ್ಥಿ ವಿರೋಧಿ ಎಂದು ಹೇಳಿದ್ದಾರೆ.