ಅಮರಾವತಿ : ರಾಜ್ಯ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 60 ವರ್ಷದಿಂದ 62 ವರ್ಷಕ್ಕೆ ಏರಿಸುವ ಸುಗ್ರೀವಾಜ್ಞೆಯನ್ನು ಜನವರಿ 1, 2022 ರಿಂದ ಜಾರಿಗೆ ತರಲು ಆಂಧ್ರಪ್ರದೇಶ ಸರ್ಕಾರ ಸೋಮವಾರ ಪ್ರಕಟಣೆ ಹೊರಡಿಸಿದೆ.
ಜೂನ್ 2014 ರಲ್ಲಿಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು ಸರ್ಕಾರವು ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 58 ರಿಂದ 60ಕ್ಕೆ ಏರಿಕೆ ಮಾಡಿತ್ತು. ನಿವೃತ್ತಿ ವಯೋಮಿತಿ ಹೆಚ್ಚಳಕ್ಕೆ ಒತ್ತಾಯಿಸದ ಸರ್ಕಾರಿ ನೌಕರರು ಸೇರಿದಂತೆ ಹಲವರಿಗೆ ಈ ಕ್ರಮ ಅಚ್ಚರಿ ಮೂಡಿಸಿದೆ. ಮಾಧ್ಯಮ ವರದಿಗಳು ರಾಜ್ಯ ಸರ್ಕಾರಿ ಯಂತ್ರದಲ್ಲಿ ಲಭ್ಯವಿರುವ ಮಾನವಶಕ್ತಿಯ ಉತ್ತಮ ಬಳಕೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರೆ, ಇನ್ನು ಕೆಲವರು ದಕ್ಷಿಣ ರಾಜ್ಯದ ಆರ್ಥಿಕ ಸ್ಥಿತಿ ಕ್ಷೀಣಿಸುತ್ತಿರುವುದರಿಂದ ಆಂಧ್ರ ರಾಜ್ಯದ ನೌಕರರ ನಿವೃತ್ತಿ ವಯಸ್ಸನ್ನು 62 ಕ್ಕೆ ಹೆಚ್ಚಿಸುವ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಈ ಹಿಂದೆ ತೆಲಂಗಾಣ ಮತ್ತು ಮಧ್ಯಪ್ರದೇಶದಂತಹ ಇತರ ಸರ್ಕಾರಗಳು ನೌಕರರ ನಿವೃತ್ತಿ ವಯಸ್ಸನ್ನು ಬದಲಾಯಿಸಿವೆ. ತೆಲಂಗಾಣದಲ್ಲಿ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 58 ರಿಂದ 61ಕ್ಕೆ ಬದಲಾಯಿಸಲಾಗಿದೆ.