ಮುಂಬೈ: ನಿಜವಾದ ಹಿಂದುತ್ವವಾದಿಯು ಮಹಾತ್ಮ ಗಾಂಧಿಯ ಬದಲು ಪಾಕಿಸ್ತಾನದ ಸ್ಥಾಪಕ ಮುಹಮ್ಮದ್ ಅಲಿ ಜಿನ್ನಾರ ಮೇಲೆ ಗುಂಡು ಹಾರಿಸುತ್ತಿದ್ದ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರ ಟ್ವೀಟ್’ಗೆ ಪ್ರತಿಕ್ರಿಯಿಸುವ ವೇಳೆ ರಾವತ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ಓರ್ವ ಹಿಂದುತ್ವವಾದಿಯಿಂದ ಮಹಾತ್ಮ ಗಾಂಧಿಯವರ ಹತ್ಯೆಯಾಯಿತು. ಎಲ್ಲಾ ಹಿಂದುತ್ವವಾದಿಗಳು ಗಾಂಧಿ ಇಲ್ಲ ಎಂದು ಭಾವಿಸಿದ್ದಾರೆ. ಸತ್ಯವು ಇರುವವರೆಗೆ ಬಾಪು ಎಂದಿಗೂ ಜೀವಿಸಿರುತ್ತಾರೆ. #ಎಂದೆಂದಿಗೂ ಗಾಂಧಿ” ಎಂದು ಮಹಾತ್ಮ ಗಾಂಧಿಯವರ 74ನೇ ಪುಣ್ಯ ಸ್ಮರಣೆಯ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು.
ಸುದ್ದಿಗಾರರ ಜೊತೆ ಮಾತನಾಡುವ ವೇಳೆ ಈ ಕುರಿತು ಪ್ರತಿಕ್ರಿಯಿಸಿದ ಸಂಜಯ್ ರಾವತ್, ‘ಭಾರತ ವಿಭಜನೆಗೆ, ಪಾಕಿಸ್ತಾನ ರಚನೆಗೆ ಪ್ರಮುಖ ಕಾರಣಕರ್ತನಾಗಿದ್ದು ಮುಹಮ್ಮದ್ ಅಲಿ ಜಿನ್ನಾ. ಆ ಸಮಯದಲ್ಲಿ ಒಂದು ವೇಳೆ ನಿಜವಾದ ಹಿಂದುತ್ವವಾದಿ ಯಾರಾದರೂ ಇದ್ದಿದ್ದರೆ, ಮಹಾತ್ಮಗಾಂಧಿಯವರ ಬದಲು, ಭಾರತ ವಿಭಜನೆಗೆ ಕಾರಣಕರ್ತನಾದ ಮುಹಮ್ಮದ್ ಅಲಿ ಜಿನ್ನಾರ ಮೇಲೆ ಗುಂಡು ಹಾರಿಸುತ್ತಿದ್ದ. ಅದು ದೇಶಭಕ್ತಿಯ ಕಾರ್ಯವಾಗುತ್ತಿತ್ತು. ಗಾಂಧಿಯವರ ಹತ್ಯೆಯನ್ನು ಇಂದಿಗೂ ಜಗತ್ತು ದುಃಖದಿಂದಲೇ ಸ್ಮರಿಸುತ್ತಿದೆ ಎಂದಿದ್ದಾರೆ.