ಅಪಘಾತವಾಗಿದ್ದ ಮಾನಸಿಕ ಅಸ್ವಸ್ಥನಿಗೆ ಚಿಕಿತ್ಸೆ ಕೊಡಿಸಿದ ಪೊಲೀಸ್ ಸಿಬ್ಬಂದಿ

Prasthutha|

ಚಾಮರಾಜನಗರ: ಪೊಲೀಸರು ಸಾರ್ವಜನಿಕರೊಂದಿಗೆ ಹೆಚ್ಚು ಕ್ರೂರವಾಗಿ ನಡೆದುಕೊಳ್ಳುತ್ತಾರೆ ಎಂಬ ಸಾರ್ವಜನಿಕ ಅಭಿಪ್ರಾಯದ ಮಧ್ಯೆ ಪೊಲೀಸ್ ಇಲಾಖೆಯಲ್ಲೂ ಹೃದಯವಂತರೂ ಇದ್ದಾರೆ ಎಂಬುದನ್ನು ಪೊಲೀಸ್ ಸಿಬ್ಬಂದಿಯೊಬ್ಬರು ಸಾಬೀತುಪಡಿಸಿದ್ದಾರೆ.

- Advertisement -

ಅಪಘಾತವಾಗಿ ಗಾಯಗೊಂಡಿದ್ದ ಮಾನಸಿಕ ಅಸ್ವಸ್ಥನಿಗೆ ಚಿಕಿತ್ಸೆ ಕೊಡಿಸಿ, ಮೂಡಲಧ್ವನಿ ವೃದ್ಧಾಶ್ರಮಕ್ಕೆ ಸೇರಿಸುವ ಮೂಲಕ ಚಾಮರಾಜನಗರ ಗ್ರಾಮಾಂತರ ಠಾಣೆಯ ಹೆಡ್ಕಾನ್ಸ್ಟೇಬಲ್ ಶಿವಮೂರ್ತಿ ಅವರು ಮಾನವೀಯತೆಯನ್ನು ಮೆರೆದಿದ್ದಾರೆ.

ತಾಲ್ಲೂಕಿನ ಶಿವಪುರದ ಬಳಿ ಶುಕ್ರವಾರ ವಾಹನವೊಂದಕ್ಕೆ ಅಡ್ಡಲಾಗಿ ಬಂದ ಹಿನ್ನೆಲೆ ಅಪಘಾತವಾಗಿ ಸಣ್ಣಪುಟ್ಟ ಗಾಯಗೊಂಡಿದ್ದ ಮಾನಸಿಕ ಅಸ್ವಸ್ಥನನ್ನು 112 ಪೊಲೀಸ್ ಸಿಬ್ಬಂದಿ ಚಿಕಿತ್ಸೆ ಕೊಡಿಸಲು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಿದ್ದರು.

- Advertisement -

ಆ ಸಂದರ್ಭದಲ್ಲಿ ಅವರ ಸ್ಥಿತಿಯನ್ನು ನೋಡಿ ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸಿದಾಗ, ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಡ್ ಕಾನ್ಸ್ಟೇಬಲ್ ಶಿವಮೂರ್ತಿ ಅವರು, ಆ ಮಾನಸಿಕ ಅಸ್ವಸ್ಥನಿಗೆ ಸ್ನಾನ ಮಾಡಿಸಿ, ಹೊಸ ಬಟ್ಟೆ ಕೊಡಿಸಿ, ಕೊರೊನಾ ಟೆಸ್ಟ್ ಕೂಡಾ ಮಾಡಿಸಿ, ತದನಂತರ ಚಿಕಿತ್ಸೆ ನೀಡಲು ನಿರಾಕರಿಸಿದ್ದ ವೈದ್ಯರಿಂದಲೇ ಚಿಕಿತ್ಸೆ ಕೊಡಿಸಿ, ತದನಂತರ ಮೂಡಲಧ್ವನಿ ವೃದ್ಧಾಶ್ರಮಕ್ಕೆ ಕರೆದುಕೊಂಡು ಹೋಗಿ ಬಿಟ್ಟಿದ್ದಾರೆ.

ಶಿವಮೂರ್ತಿಯವರ ಈ ಹೃದಯಸ್ಪರ್ಶಿ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.



Join Whatsapp