ಲಕ್ನೋ; ಕಾಂಗ್ರೆಸ್, ಸಮಾಜವಾದಿ ಸೇರಿದಂತೆ ರಾಜಕೀಯ ಪಕ್ಷಗಳು ಮುಸ್ಲಿಮರನ್ನು ವೋಟ್ ಬ್ಯಾಂಕ್ ಆಗಿ ಮಾತ್ರವೇ ಪರಿಗಣಿಸುತ್ತವೆ. ಚುನಾವಣೆಯಲ್ಲಿ ಮುಸ್ಲಿಮರು ಟಿಕೆಟ್ ಪಡೆಯಬೇಕಾದರೆ ಭಿಕ್ಷೆ ಕೇಳಬೇಕಾದ ಪರಿಸ್ಥಿತಿ ಇದೆ ಎಂದು ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಉವೈಸಿ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಎಐಎಂಐಎಂ ಪಕ್ಷವು ಸ್ಪರ್ಧಿಸುವುದರಿಂದ
ಮುಸ್ಲಿಮರ ಮತಗಳು ಹಂಚಿ ಹೋಗಲಿದ್ದು, ಇದು ಬಿಜೆಪಿಗೆ ಸಹಾಯವಾಗಲಿದೆ ಎಂಬ ಆರೋಪವನ್ನು ಉವೈಸಿ ತಳ್ಳಿಹಾಕಿದ್ದಾರೆ.
‘ಜಾತ್ಯತೀತರು ಎಂದು ಕರೆಸಿಕೊಳ್ಳಲು ಬಯಸುವರಿಗೆ ಮುಸ್ಲಿಮರು ರತ್ನಗಂಬಳಿ ಹಾಸಬೇಕು ಮತ್ತು ಜಿಂದಾಬಾದ್ ಘೋಷಣೆಗಳನ್ನು ಕೂಗಬೇಕು. ಇದನ್ನಷ್ಟೇ ಅವರು ಬಯಸುತ್ತಾರೆ. ಚುನಾವಣೆಯಲ್ಲಿ ಟಿಕೆಟ್ ಬೇಕಾದರೆ ಮುಸ್ಲಿಮರು ಭಿಕ್ಷೆ ಕೇಳಬೇಕು. ಇದು ಅವರ ದ್ವಂದ್ವ ನೀತಿಗಳನ್ನು ತೋರಿಸುತ್ತದೆ’ ಎಂದು ಒವೈಸಿ ವಾಗ್ದಾಳಿ ನಡೆಸಿದ್ದಾರೆ.
ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ‘ಎನ್‌ಡಿಟಿವಿ‘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಒವೈಸಿ, ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷಗಳು ಮುಸ್ಲಿಮರ ಮತಗಳನ್ನು ಮಾತ್ರ ಬಯಸುತ್ತವೆ. ಆದರೆ, ಅವರು ಮುಸ್ಲಿಮರಿಗೆ ಟಿಕೆಟ್ ನೀಡಲು ಹಿಂದೇಟು ಹಾಕುತ್ತಾರೆ ಎಂದು ಹೇಳಿದ್ದಾರೆ.