‘ಗಲ್ಲಿ ಪ್ರೀಮಿಯರ್ ಲೀಗ್’ ಸೀಸನ್ – 1: ಕಂದಕ್ ಟೈಗರ್ಸ್ ಚಾಂಪಿಯನ್

Prasthutha|

ಮಂಗಳೂರು: ದಿವಂಗತ ಸರೋಜಿನಿ ಪುಂಡಲೀಕ ಕರ್ಕೇರ ಸ್ಮರಣಾರ್ಥ ನಗರದ ಕಂದಕದ ಬದ್ರಿಯಾ 1ನೇ ಅಡ್ಡ ರಸ್ತೆಯಲ್ಲಿ ನಡೆಯುತ್ತಿದ್ದ ‘ಗಲ್ಲಿ ಪ್ರೀಮಿಯರ್ ಲೀಗ್’ ಸೀಸನ್ 1ರಲ್ಲಿ ಕಂದಕ್ ಟೈಗರ್ಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತು.

- Advertisement -

ಗುರುವಾರ ಹೊನಲು ಬೆಳಕಿನಲ್ಲಿ ನಡೆದ ನಿಗದಿತ 5 ಓವರ್ ನ ಫೈನಲ್ ಪಂದ್ಯದಲ್ಲಿ ಜಿದ್ದಾಜಿದ್ದಿನ ಆಟ ನಡೆದು ರೋಯಲ್ ಚಾಲೆಂಜರ್ಸ್ ತಂಡವನ್ನು ಕಂದಕ್ ಟೈಗರ್ಸ್ ತಂಡವು 7 ವಿಕೆಟ್ ಗಳಿಂದ ಮಣಿಸಿ ವಿಜಯ ಪತಾಕೆ ಹಾರಿಸಿತು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಕಂದಕ್ ಟೈಗರ್ಸ್ ತಂಡವು ರೋಯಲ್ ಚಾಲೆಂಜರ್ಸ್ ಕಂದಕ್ ತಂಡವನ್ನು 4.5 ಓವರ್ ಗಳಲ್ಲಿ 15 ರನ್ ಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಯಿತು. 16 ರನ್ ಗಳ ಗುರಿ ಬೆನ್ನಟ್ಟಿದ ಕಂದಕ್ ಟೈಗರ್ಸ್ ಅಂತಿಮ ಓವರ್ 2 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್ ಗಳ ನಷ್ಟದಲ್ಲಿ ಗುರಿ ತಲುಪಿತು.

- Advertisement -

ಇದಕ್ಕೂ ಮುನ್ನ ಬುಧವಾರ ರಾತ್ರಿ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಕಂದಕ್ ವಾರಿಯರ್ಸ್ ತಂಡವನ್ನು ಮಣಿಸಿ ಕಂದಕ್ ಟೈಗರ್ಸ್ ಫೈನಲ್ ಗೇರಿದರೆ, ರೋಯಲ್ ಚಾಲೆಂಜರ್ಸ್ ಕಂದಕ್ ಅಂಕ ಪಟ್ಟಿಯಲ್ಲಿ ಪ್ರಥಮ ಸ್ಥಾನಿಯಾಗಿ ಫೈನಲ್ ತಲುಪಿತ್ತು.
ಫೈನಲ್ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಕಂದಕ್ ಟೈಗರ್ಸ್ ನ ಕಪ್ತಾನ ಶೌಕತ್ ಅಲಿ, ಸರಣಿ ಶ್ರೇಷ್ಠ ಕಂದಕ್ ಟೈಗರ್ಸ್ ನ ರಝಾಕ್, ಬೆಸ್ಟ್ ಬೌಲರ್ ಕಂದಕ್ ವಾರಿಯರ್ಸ್ ನ ರಿಲ್ವಾನ್, ಕಂದಕ್ ಸೂಪರ್ ಕಿಂಗ್ಸ್ ನ ನಿಯಾಝ್ ಉತ್ತಮ ಬ್ಯಾಟ್ಸ್ ಮನ್ ಪ್ರಶಸ್ತಿ ಪಡೆದರು.

ತೀರ್ಪುಗಾರರಾಗಿ ಅಶ್ವಿನ್, ನಿಹಾಲ್, ಅನೀಶ್ ಕಾರ್ಯ ನಿರ್ವಹಿಸಿದ್ದರು.

ಸಮಾರೋಪ, ಸನ್ಮಾನ: ಒಂದು ವಾರ ಕಾಲ ನಡೆದ ‘ಗಲ್ಲಿ ಪ್ರೀಮಿಯರ್ ಲೀಗ್’ ಸೀಸನ್ 1 ಸಮಾರೋಪ ಕಾರ್ಯಕ್ರಮದ ವೇದಿಕೆಯಲ್ಲಿ ದಿವಂಗತ ಸರೋಜಿನಿ ಪುಂಡಲೀಕ ಕರ್ಕೇರ ಪುತ್ರ ರವಿ ಬೆಂಗರೆ, ಹಿರಿಯ ಕ್ರೀಡಾ ತೀರ್ಪುಗಾರ ರೊನಾಲ್ಡ್ ಪಿಂಟೋ, ಸಹಾಯಕ ಸಬ್ ಇನ್ಸ್ ಪೆಕ್ಟರ್ ವರುಣ್ ಆಳ್ವ, ಕ್ರಿಕೆಟ್ ಆಟಗಾರ ಅಶ್ವಿನ್, ರಿಲಯನ್ಸ್ ಕ್ರಿಕೆಟ್ ಕ್ಲಬ್ ನ ಹಿರಿಯ ಆಟಗಾರ ಖುರೈಷ್ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಸ್ಥಳೀಯ ಕಾರ್ಪೊರೇಟರ್ ಅಬ್ದುಲ್ ಲತೀಫ್ ಕಂದಕ್, ಉದ್ಯಮಿ ಶರೀಫ್ ಕಂದಕ್, ಪಾಂಡೇಶ್ವರ ಪಿಎಸ್ಐ ಅನಂತ್ ಮುರ್ಡೇಶ್ವರ, ಸ್ಥಳೀಯ ಹಿರಿಯ ಮುಂದಾಳು ಉಸ್ಮಾನ್, ಚಿತ್ರನಟ ಮೊಹಮ್ಮದ್ ನಯೀಂ, ಹಸನ್, ಅಝ್ಮಲ್, ಕರೀಂ, ಮುಕ್ತಾರ್, ಶಕೀಬ್, ಮನ್ಸೂರ್ ಕುದ್ರೋಳಿ, ಖಾದರ್, ಝಹೀರ್, ಅಲ್ತಾಫ್, ರಿಯಾಝ್ ಮತ್ತಿತರರು ಉಪಸ್ಥಿತರಿದ್ದರು.
ಹುಸೈನ್ ಕಾಟಿಪಳ್ಳ ನಿರೂಪಿಸಿದರು. ಲತೀಫ್ ಕಂದಕ್ ಸ್ವಾಗತಿಸಿದರು.



Join Whatsapp