ಹೊಸದಿಲ್ಲಿ: ದಾರಿ ತಪ್ಪಿ ಚೀನಾದ ಗಡಿಯೊಳಗೆ ಪ್ರವೇಶಿಸಿದ್ದ ಅರುಣಾಚಲ ಪ್ರದೇಶದ ಮಿರಂ ತರೋನ್ ಎಂಬ ಯುವಕನನ್ನು ಚೀನಾ ಸೇನೆ ಭಾರತಕ್ಕೆ ಹಸ್ತಾಂತರಿಸಿದೆ.
“ಜನವರಿ 20 ರಂದು ತಮ್ಮ ಪ್ರದೇಶದಲ್ಲಿ ಯುವಕನೊಬ್ಬ ಪತ್ತೆಯಾಗಿರುವ ಬಗ್ಗೆ ಮಾಹಿತಿ ನೀಡಿದ್ದ ಚೀನಾ, ಆ ವ್ಯಕ್ತಿಯನ್ನು ದೃಢೀಕರಿಸಲು ಹೆಚ್ಚಿನ ವಿವರಗಳನ್ನು ಕೇಳಿ ಯುವಕನ ಮಾಹಿತಿಯನ್ನು ಹಂಚಿಕೊಂಡಿತ್ತು.
ಇದೀಗ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಮಿರಂ ತರೋನ್ ಅನ್ನು ಭಾರತೀಯ ಸೇನೆಗೆ ಹಸ್ತಾಂತರಿಸಿದೆ. ವೈದ್ಯಕೀಯ ಪರೀಕ್ಷೆ ಸೇರಿದಂತೆ ಕಾರ್ಯವಿಧಾನಗಳು ನಡೆಯುತ್ತಿವೆ,” ಎಂದು ಕೇಂದ್ರ ಕಾನೂನು ಸಚಿವ ಮತ್ತು ಅರುಣಾಚಲದ ಬಿಜೆಪಿ ನಾಯಕ ಕಿರಣ್ ರಿಜಿಜು ಹೇಳಿದ್ದಾರೆ.
ಜನವರಿ 18 ರಂದು ಮಿರಂ ತರೋನ್ ಕಾಣೆಯಾಗಿದ್ದನು. ಅರುಣಾಚಲದ ಬಿಜೆಪಿ ಸಂಸದ ತಪೀರ್ ಗಾವೋ ಮತ್ತು ಯುವಕನ ಪೋಷಕರು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯು ಭಾರತೀಯ ಪ್ರದೇಶದಿಂದ ಅಪಹರಿಸಿದೆ ಎಂದು ಆರೋಪಿಸಿದ್ದರು. ಆದರೆ “ಯುವಕನು ಚೀನಾದ ಭಾಗದಲ್ಲಿ ಪತ್ತೆಯಾಗಿದ್ದು ಹವಾಮಾನ ವೈಪರೀತ್ಯದಿಂದಾಗಿ ಆತನ ಮರಳುವಿಕೆಯನ್ನು ವಿಳಂಬಗೊಳಿಸಲಾಗುತ್ತಿದೆ. ಗಣರಾಜ್ಯೋತ್ಸವದಂದು ಭಾರತೀಯ ಸೇನೆ ಮತ್ತು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ ನಡುವಿನ ಹಾಟ್ ಲೈನ್ ಸಂಬಂಧದ ಆಧಾರದ ಮೇಲೆ ನಮ್ಮ ನಾಗರಿಕನ ವರ್ಗಾವಣೆಗೆ ಚೀನಾದ ಸೇನೆ ಸಕಾರಾತ್ಮಕವಾಗಿ ಸ್ಪಂದಿಸಿದೆ ಮತ್ತು ವರ್ಗಾವಣೆಗೆ ಸ್ಥಳವನ್ನು ಸೂಚಿಸಿದೆ. ಅವರು ಶೀಘ್ರದಲ್ಲೇ ದಿನಾಂಕ ಮತ್ತು ಸಮಯವನ್ನು ಘೋಷಿಸುವ ಸಾಧ್ಯತೆಯಿದೆ ಎಂದು ರಿಜಿಜು ಬುಧವಾರ ಟ್ವೀಟ್ ಮಾಡಿದ್ದರು.
ಕಾನೂನುಬಾಹಿರವಾಗಿ ಗಡಿ ದಾಟಿರುವ ಭಾರತೀಯ ಪ್ರಜೆಗೆ ಚೀನಾದ ಗಡಿ ರಕ್ಷಣಾ ಸಿಬ್ಬಂದಿಯು ಮಾನವೀಯ ನೆರವು ನೀಡಿ ಮರಳಿ ಕಳುಹಿಸಿದ್ದಾರೆ ಎಂದು ಚೀನಾ ಸರ್ಕಾರದೊಂದಿಗೆ ಸಂಯೋಜಿತವಾಗಿರುವ ಗ್ಲೋಬಲ್ ಟೈಮ್ಸ್ ಪತ್ರಿಕೆಯು ಗುರುವಾರ ವರದಿ ಮಾಡಿದೆ.