ರಾಯಚೂರು: ಸಂವಿಧಾನ ಶಿಲ್ಪಿ ಹಾಗೂ ಭಾರತ ರತ್ನ ಡಾ. ಬಿ.ಅರ್. ಅಂಬೇಡ್ಕರ್ ಬಗ್ಗೆ ತಮಗೆ ಅಪಾರ ಗೌರವ ಮತ್ತು ಅಭಿಮಾನ ಇದ್ದು, ಅವರಿಗೆ ನಾನು ಅವಮಾನ ಮಾಡಿಲ್ಲ ಎಂದು ರಾಯಚೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಜನವರಿ 26 ರಂದು ಬೆಳಿಗ್ಗೆ 8-30 ಕ್ಕೆ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಉಚ್ಚ ನ್ಯಾಯಾಲಯದವರು ನೀಡಿದ ಎಸ್.ಒ.ಪಿ. ಪ್ರಕಾರ ನ್ಯಾಯಾಧೀಶರು, ನ್ಯಾಯಾಲಯದ ಸಿಬ್ಬಂದಿ, ವಕೀಲರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸೇರಿ ಒಟ್ಟು 200 ಜನರಿಗೆ ಮೀರದಂತೆ ಗಣರಾಜೋತ್ಸವ ಆಚರಿಸಲು ನಿರ್ಣಾಯಿಸಿ ನೋಟಿಸು ನೀಡಲಾಗಿತ್ತು.
ಆದರೆ ನಿನ್ನೆ ಮುಂಜಾನೆ 8-15 ರ ಸುಮಾರಿಗೆ ನಮ್ಮ ಸಿಬ್ಬಂದಿ ನನ್ನ ಕೊಠಡಿಗೆ ಬಂದು ಕೆಲವು ವಕೀಲರು ಮಹಾತ್ಮ ಗಾಂಧಿಯವರ ಫೋಟೋದ ಜೊತೆ ಡಾ: ಬಿ.ಅರ್. ಅಂಬೇಡ್ಕರ್ ರವರ ಫೋಟೊವನ್ನು ಸಹ ಇಟ್ಟು ಗಣರಾಜೋತ್ಸವ ಆಚರಿಸಬೇಕೆಂದು ಸರಕಾರದ ಸುತ್ತೋಲೆ ಇದೆ ಎಂದು ತಿಳಿಸಿದ್ದಾರೆ. ನಂತರ ಕೆಲವು ವಕೀಲರು ಬಂದು ಸರಕಾರದ ಸುತ್ತೋಲೆಯ ಪ್ರಕಾರ ಡಾ: ಬಿ.ಅರ್ . ಅಂಬೇಡ್ಕರ್ ರವರ ಫೋಟೋವನ್ನು ಇಟ್ಟು ಗಣರಾಜೋತ್ಸವ ಆಚರಿಸಬೇಕು ಎಂದು ಒತ್ತಾಯಿಸಿದರು.
ಆಗ ನಾನು ಆ ಸುತ್ತೋಲೆಯನ್ನು ಉಚ್ಛ ನ್ಯಾಯಾಲಯದ ಪೂರ್ಣಪೀಠದ ಮುಂದೆ ಪರಿಗಣೆನೆಗೆ ಇದೆ, ಅಲ್ಲಿಯವರೆಗೆ ನಾವು ಕಾಯಬೇಕು ಎಂದು ಉಚ್ಚ ನ್ಯಾಯಾಲಯದ ವಿಲೇಖನಾಧಿಕಾರಿಗಳು ನಮ್ಮ ಲೀಡರ್ಸ್ ಗುಂಪಿನಲ್ಲಿ ತಿಳಿಸಿದ್ದಾರೆ, ಆದ ಕಾರಣ ಒತ್ತಾಯಿಸಬೇಡಿ ಎಂದು ವಿನಂತಿಸಿಕೊಂಡೆ. ಅದೇ ಸಮಯದಲ್ಲಿ ರಾಯಚೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜೆ. ಬಸವರಾಜ ವಕೀಲರು ಬಂದು ಅವರಿಗೆ ವಿಲೇಖನಾಧಿಕಾರಿಗಳ ಸೂಚನೆಯ ಬಗ್ಗೆ ತಿಳಿಸಿ ವಿವರಿಸಿ ಹೊರಗೆ ಕರೆದುಕೊಂಡು ಹೋಗಿದ್ದಾರೆ.
ಬಳಿಕ ನಾನು ನಮ್ಮ ಎಲ್ಲಾ ನ್ಯಾಯಾಧೀಶರನ್ನು ಧ್ವಜಾರೋಹಣಾ ಸ್ಥಳಕ್ಕೆ ಹೋಗಿ ಧ್ವಜಾರೋಹಣ ನೆರವೇರಿಸಿದ್ದೇವೆ. ಯಾವುದೇ ವ್ಯಕ್ತಿಗಳು ಡಾ: ಬಿ.ಅರ್ . ಅಂಬೇಡ್ಕರ್ ರವರ ಫೋಟೋ ತೆಗೆದುಕೊಂಡು ಬಂದು ಇಟ್ಟಿದ್ದನ್ನು ಮತ್ತು ತೆಗೆದುಕೊಂಡು ಹೋಗಿರುವುದನ್ನು ನಾನು ನೋಡಿಲ್ಲ. ಈ ಸತ್ಯ ಘಟನೆಯನ್ನು ಮರೆಮಾಚಿ ನಾನು ಅವರಿಗೆ ಡಾ : ಕೆ.ಅರ್ . ಅಂಬೇಡ್ಕರವರ ಫೋಟೊ ತೆಗೆದರೆ ಮಾತ್ರ ಧ್ವಜಾರೋಹಣಕ್ಕೆ ಬರುತ್ತೇನೆ ಎಂದು ಅಪಪ್ರಚಾರ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಪ್ರತಿ ವರ್ಷ ನವೆಂಬರ್ 26 ರಂದು ಸಂವಿಧಾನ ದಿನಾಚರಣೆ ಆಚರಣೆ ಮಾಡುತ್ತಾ ಬಂದಿದ್ದು, ಆ ಸಮಯದಲ್ಲಿ ನಾನು ಅಂತಹ ಮಹಾನ್ ವ್ಯಕ್ತಿತ್ವ ತತ್ವ , ಆದರ್ಶ ಮತ್ತು ನಡೆ ನುಡಿಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದು ವಿನಂತಿಸಿಕೊಂಡಿದ್ದೇನೆ. ಅಂತಹ ಮಹಾನ್ ವ್ಯಕ್ತಿಗೆ ನಾನು ಯಾವತ್ತು ಅಗೌರವ ತೋರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆದರೆ ನನ್ನ ಬಗ್ಗೆ ಯಾವ ಉದ್ದೇಶ ಇಟ್ಟುಕೊಂಡು ಆ ರೀತಿ ಅಪಪ್ರಚಾರ ಮಾಡಿದ್ದಾರೆ ಎಂದು ನನಗೆ ತಿಳಿಯದಾಗಿದೆ. ಆದ ಕಾರಣ ಆ ವದಂತಿ ಸುಳ್ಳಾಗಿದ್ದು ಅದನ್ನು ನಂಬಬೇಡಿ ಎಂದು ಅವರು ವಿನಂತಿಸಿಕೊಂಡಿದ್ದಾರೆ.