ಹೊಸದಿಲ್ಲಿ: “ಉದ್ದೇಶಪೂರ್ವಕವಾಗಿ ಮತ್ತು ಕೆಟ್ಟ ಉದ್ದೇಶ”ದೊಂದಿಗೆ ಧಾರ್ಮಿಕ ಭಾವನೆಗಳನ್ನು ಪ್ರಚೋದಿಸಿದ ಆರೋಪದಲ್ಲಿ ಗೋವಾದ ಸಹಾಯಕ ಪ್ರೊಫೆಸರ್ ಒಬ್ಬರ ವಿರುದ್ಧ ಸೋಮವಾರದಂದು ಎಫ್.ಐ.ಆರ್ ದಾಖಲಿಸಲಾಗಿದೆ. 6 ತಿಂಗಳು ಹಳೆಯ ಫೇಸ್ಬುಕ್ ಪೋಸ್ಟೊಂದರಲ್ಲಿ ಪ್ರೊಫೆಸರ್, ಮಂಗಲಸೂತ್ರವನ್ನು ಧರಿಸಿದ ಮಹಿಳೆಯರನ್ನು ಸರಳುಗಳಿಂದ ಬಂಧಿತ ನಾಯಿಗೆ ಹೋಲಿಸಿದ್ದರು.
ಪಣಜಿಯ ವಿ.ಎಂ. ಸಾಲ್ಗವ್ಕರ್ ಕಾನೂನು ಕಾಲೇಜಿನಲ್ಲಿ ರಾಜಕೀಯ ವಿಜ್ನಾನ ವಿಷಯ ಬೋಧಿಸುತ್ತಿರುವ ಶಿಲ್ಪಾ ಸಿಂಗ್ ವಿರುದ್ಧ ಹಿಂದೂ ಯುವ ವಾಹಿನಿಯ ಗೋವಾ ಘಟಕದ ಸದಸ್ಯ ರಾಜೀವ್ ಝಾ ಸಲ್ಲಿಸಿದ ದೂರಿನ ಆಧಾರದಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ತಿಳಿಸಿದೆ. ಈ ಹಿಂದೆ ಸಿಂಗ್ ವಿರುದ್ಧ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎ.ಬಿ.ವಿ.ಪಿ) ದೂರು ನೀಡಿದ್ದು, ಅದರಲ್ಲಿ ಆಕೆ ತನ್ನ ವಿದ್ಯಾರ್ಥಿಗಳಿಗೆ ಪಾಠ ಮಾಡುವ ವಿಷಯಗಳನ್ನು ವಿರೋಧಿಸಿತ್ತು.
ಸಿಂಗ್ ಕೂಡ ಝಾ ವಿರುದ್ಧ ದೂರು ಸಲ್ಲಿಸಿದ್ದು, ಆತನ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ. ಝಾ ತನ್ನ ವಿರುದ್ಧ ಅಪರಾಧ ಬೆದರಿಕೆ ಹಾಕಿದ್ದಾನೆ ಮತ್ತು ನಿಂದನಾತ್ಮಕ ಫೇಸ್ಬುಕ್ ಪೋಸ್ಟ್ ಗಳ ಮೂಲಕ ದುರ್ವರ್ತನೆ ತೋರಿದ್ದಾನೆ ಎಂಬುದಾಗಿ ಸಿಂಗ್ ಆರೋಪಿಸಿದ್ದಾರೆ.