ಹೊಸದಿಲ್ಲಿ: ಇತ್ತೀಚೆಗೆ ಬಿಡುಗಡೆಯಾದ ಪುಷ್ಪಾ ಸಿನಿಮಾ ಮತ್ತು ಬದ್ನಾಮ್ ವೆಬ್ ಸೀರೀಸ್ ನಿಂದ ಪ್ರೇರಣೆಗೊಂಡ ಅಪ್ರಾಪ್ತರ ಗುಂಪೊಂದು 24 ವರ್ಷದ ಶಿಬು ಹುಸೇನ್ ಎಂಬ ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆಗೆ ಸಂಬಂಧಿಸಿ ಅಪ್ರಾಪ್ತ ವಯಸ್ಸಿನ ಆರೋಪಿಗಳನ್ನು ಬಂಧಿಸಲಾಗಿದೆ. ರಾಜಧಾನಿ ದಿಲ್ಲಿಯಲ್ಲಿ ನಡೆದಿದೆ. ಜನವರಿ 19ರಂದು ಈ ಕೊಲೆ ನಡೆದಿದ್ದು, ಹುಡುಗರು ಚಿನ್ನಿದಾಂಡು ಆಡುವುದನ್ನು ಶಿಬು ಹುಸೇನ್ ವಿರೋಧಿಸಿದ ಕಾರಣ ಹತ್ಯೆ ನಡೆದಿದೆ ಎನ್ನಲಾಗಿದೆ.
ಎಸಿಪಿ ತಿಲಕ್ ಚಂದ್ರ ಬಿಷ್ತ್ ಅವರ ನೇತೃತ್ವದ ತಂಡ ಬಾಲಕರನ್ನು ಬಂಧಿಸಿ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಮೂವರು ಆರೋಪಿಗಳು 15, 16 ಮತ್ತು 17 ವಯಸ್ಸಿನ ಅಪ್ರಾಪ್ತರಾಗಿದ್ದಾರೆ. ಹುಡುಗರು ಅಪರಾಧ ಆಧಾರಿತ ಸಿನಿಮಾಗಳಿಂದ ಪ್ರೇರಿತರಾಗಿರುವುದು ತಿಳಿದು ಬಂದಿದೆ ಎಂದು ಡಿಸಿಪಿ ಉಷಾ ರಂಗಾನಿ ಹೇಳಿದ್ದಾರೆ.
ಕೊಲೆ ನಡೆಸಿದ ಹುಡುಗರು ಇನ್ಸ್ಟಾಗ್ರಾಮ್ನಲ್ಲಿ ಸಕ್ರಿಯರಾಗಿದ್ದು, ಸಿನಿಮಾ ಹಾಡುಗಳಿಗೆ ಅಭಿನಯಿಸಿದ ವಿಡಿಯೋಗಳನ್ನು ಆಗಾಗ್ಗೆ ಪೋಸ್ಟ್ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇವರ ಅನೇಕ ಪೋಸ್ಟ್ ಗಳು ನಿಂದನಾತ್ಮಕ ಮತ್ತು ಹಿಂಸಾತ್ಮಕ ಸಂದೇಶಗಳನ್ನು ಒಳಗೊಂಡಿವೆ. ಸದ್ಯ ಎಲ್ಲರನ್ನೂ ಬಾಲಗೃಹದಲ್ಲಿ ಇರಿಸಲಾಗಿದೆ.