ಕೆ.ಎಸ್.ಆರ್.ಟಿ.ಸಿ ಯಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚನೆ: ಆರೋಪಿಗೆ ಜಾಮೀನು ನಿರಾಕರಣೆ

Prasthutha|

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ (ಕೆಎಸ್ಆರ್ಟಿಸಿ) ಕೆಲಸ ಕೊಡಿಸುವ ಆಮಿಷವೊಡ್ಡಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚನೆ ಎಸಗಿದ ಪ್ರಕರಣದ ಆರೋಪಿ ಚಾಲಕನಿಗೆ ಹೈಕೋರ್ಟ್ ಜಾಮೀನು ನೀಡಲು ನಿರಾಕರಿಸಿದೆ.
ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡುವಂತೆ ಕೋರಿ ಬಳ್ಳಾರಿಯ ಹಗರಿಬೊಮ್ಮನಹಳ್ಳಿಯ ಮಂಜುನಾಥ್ ಬಿಲ್ಲಾ ನಾಯಕ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಚ್.ಪಿ ಸಂದೇಶ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.

- Advertisement -

ಅರ್ಜಿದಾರನ ವಿರುದ್ಧದ ಆರೋಪಗಳು ಗಂಭೀರ ಸ್ವರೂಪದ್ದಾಗಿದ್ದು ದೂರುದಾರರಾದ ಅರಗಿಶೆಟ್ಟಿ ಅಷ್ಟೇ ಅಲ್ಲದೆ ಅನೇಕರಿಗೆ ಉದ್ಯೋಗದ ಆಮಿಷವೊಡ್ಡಿ ಹಣ ಪಡೆದು ವಂಚಿಸಿರುವ ಆರೋಪಗಳಿದ್ದು ಈ ಹಂತದಲ್ಲಿ ಆರೋಪಿಗೆ ಜಾಮೀನು ನೀಡಿದರೆ ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಅಥವಾ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟು ಜಾಮೀನು ಕೋರಿಕೆಯನ್ನು ತಿರಸ್ಕರಿಸಿದೆ.

ಬಿಕಾಂ ಪದವೀಧರನಾಗಿರುವ ಬಾಗಲಕೋಟೆಯ ಅರಗಿಶೆಟ್ಟಿ ನಗರದ ಜಲಮಂಡಳಿಯಲ್ಲಿ ಕೆಲಸ ಮಾಡುತ್ತಿರುವ ಸೋದರನ್ನು ಕಾಣಲು ಕೆಎಸ್ಆರ್ಟಿಸಿ ಬಸ್ಸಿನಲ್ಲಿ ನಗರಕ್ಕೆ ಪ್ರಯಾಣಿಸುತ್ತಿದ್ದಾಗ ಕೆಎಸ್ಆರ್ಟಿಸಿ ಬಸ್ ಚಾಲಕ ಮಂಜುನಾಥ ಬಿಲ್ಲಾ ನಾಯಕ್ ತನ್ನನ್ನು ಪರಿಚಯಿಸಿಕೊಂಡಿದ್ದರು.

- Advertisement -

ಮತ್ತೊಮ್ಮೆ ಸಿಕ್ಕಾಗ ತನಗೆ ಕೆಎಸ್ಆರ್ಟಿಸಿ ಹಿರಿಯ ಅಧಿಕಾರಿಗಳ ಪರಿಚಯ ಇದ್ದು, ಲಂಚ ನೀಡಿದರೆ ಸಂಚಾರಿ ನಿರೀಕ್ಷಕ ಹುದ್ದೆ ಕೊಡಿಸುವುದಾಗಿ ಆಮಿಷಿವೊಡ್ಡಿದ್ದರು.

ಅದರಂತೆ, 2018ರ ನವೆಂಬರ್ನಲ್ಲಿ ಬೆಂಗಳೂರಿನ ಮಧು ಹೋಟೆಲ್ನಲ್ಲಿ ಅರಗಿಶೆಟ್ಟಿ ಹಾಗೂ ಮಂಜುನಾಥ್ ಭೇಟಿಯಾಗಿ ಚರ್ಚಿಸಿದಾಗ 12 ಲಕ್ಷ ರೂಪಾಯಿ ಲಂಚಕ್ಕೆ ಆರೋಪಿ ಬೇಡಿಕೆಯಿಟ್ಟದ್ದರು. ಬಳಿಕ, ಅರಗಿಶೆಟ್ಟಿ ಆರ್ಟಿಜಿಎಸ್ ಮೂಲಕ 11 ಲಕ್ಷ ರೂಪಾಯಿ ನೀಡಿದ್ದರು. ಕೆಲಸವನ್ನೂ ಕೊಡಿಸದೇ, ಹಣವನ್ನೂ ಹಿಂದಿರುಗಿಸದೇ ಇದ್ದಾಗ ಅರಗಿಶೆಟ್ಟಿ ಮಾಗಡಿ ಠಾಣೆ ಪೊಲೀಸರಿಗೆ 2021ರ ಅಕ್ಟೋಬರ್ನಲ್ಲಿ ದೂರು ನೀಡಿದ್ದರು.

ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು ಆರೋಪಿ ಮಂಜುನಾಥ್ ಅವರನ್ನು ಅಕ್ಟೋಬರ್ 5ರಂದು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. 2021ರ ನವೆಂಬರ್ 23ರಂದು ನಗರದ 67ನೇ ಹೆಚ್ಚುವರಿ ಸಿಟಿ ಸಿವಿಲ್ ಅಂಡ್ ಸೆಷನ್ಸ್ ಕೋರ್ಟ್ ಜಾಮೀನು ನಿರಾಕರಿಸಿತ್ತು. ಈ ಹಿನ್ನೆಲೆ ಆರೋಪಿ ಜಾಮೀನು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.



Join Whatsapp