ಚಾಮರಾಜನಗರ: ಬೆಂಗಳೂರು ಶಾಸಕ ಹಾಗೂ ಡಿ.ಕೆ ಶಿವಕುಮಾರ್ ಭೇಟಿಯಲ್ಲಿ ಯಾವುದೇ ವಿಶೇಷತೆಯಿಲ್ಲ. ಊಟ-ತಿಂಡಿ ತಿನ್ನಲೂ ಹೋಗಬಾರದೇ ಎಂದು ಸಚಿವ ವಿ.ಸೋಮಣ್ಣ ಪ್ರಶ್ನಿಸಿದರು.
ಚಾಮರಾಜನಗರದಲ್ಲಿ ಧ್ವಜಾರೋಹಣ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರು ಡಿಕೆಶಿ ಭೇಟಿ ವಿಚಾರಕ್ಕೆ ಏಕೆ ಉಪ್ಪು, ಖಾರ ಹಾಕ್ತೀರಿ?. ರೆಸಾರ್ಟ್ ಎಲ್ಲರಿಗೂ ಸೇರಿದ್ದು. ಬಿಜೆಪಿಯವರೂ, ಜೆಡಿಎಸ್ನವರೂ ಹಾಗೂ ಕಾಂಗ್ರೆಸ್ನವರೂ ಹೋಗ್ತಾರೆ. ಡಿಕೆಶಿ ಜತೆ ಯಾರೂ ಮಾತನಾಡಬಾರದೇ?. ಅವರು ಕಾಸ್ಮೋಪಾಲಿಟನ್ ಸಿಟಿಯವರು. ಸುತ್ತಾಡಲು ಹೋಗ್ತಾರೆ, ನಾವು ಬೀದಿ ಸುತ್ತುತ್ತೇವೆ ಎಂದು ಸಿಡಿಮಿಡಿಗೊಂಡರು.
ಬಿಜೆಪಿಯ ಕೆಲವರು ಕಾಂಗ್ರೆಸ್ ಗೆ ಹೋಗ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಯತ್ನಾಳ್ ಅವರು ವಿಜಯಪುರದ ಗೌಡ್ರು, ನಮ್ಮ ನಾಯಕರು. ನೂರಾರು ಕಿ.ಮೀ ದೂರದಲ್ಲಿದ್ದು, ಅವರೊಂದಿಗೆ ಮಾತನಾಡಲು ಫೋನ್ ಮಾಡಿದ್ದೆ. ಅವರು ಕರೆ ಸ್ವೀಕರಿಸಲಿಲ್ಲ, ಅವರ ಬಳಿ ವಿಚಾರ ತಿಳಿದುಕೊಂಡು ನಿಮ್ಮೊಂದಿಗೆ ಮಾತನಾಡುತ್ತೇನೆ ಎಂದರು.
ಬಿಜೆಪಿಯವರು ಕಾಂಗ್ರೆಸ್ಗೆ ಬರುತ್ತಾರೆ, ಪಟ್ಟಿ ಇದೆ ಎಂದಿದ್ದ ಸಿದ್ದರಾಮಯ್ಯ, ಪರಮೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸೋಮಣ್ಣ, ಇಂದು ಗಣರಾಜ್ಯೋತ್ಸವ. ಅಭಿವೃದ್ಧಿ ವಿಚಾರ ಮಾತ್ರ ಮಾತನಾಡುತ್ತೇನೆ, ಅವರಿಗೂ ಒಳ್ಳೆಯದಾಗಲಿ, ಅವರಿಬ್ಬರೂ ಸ್ವತಂತ್ರರಾಗಲಿ ಎಂದು ಟಾಂಗ್ ನೀಡಿದರು.
ಹೊಗೇನಕಲ್ ವಿವಾದಿತ ಪ್ರದೇಶದಲ್ಲಿ ಅಭಿವೃದ್ಧಿ ಕೈಗೊಳ್ಳುತ್ತಿರುವ ಕುರಿತು ಮಾತನಾಡಿ, ತಮಿಳುನಾಡು ಸರ್ಕಾರವಿರಲಿ, ಯಾರೇ ಆಗಲಿ ಒಂದಿಂಚು ಜಾಗವನ್ನು ಕಬಳಿಸಲು ನಾವು ಬಿಡುವುದಿಲ್ಲ. ಈ ಹಿಂದೆ ನನ್ನ ಅವಧಿಯಲ್ಲೇ ಪಾಲಾರ್ನಿಂದ ಮಲೆಮಹದೇಶ್ವರ ಬೆಟ್ಟಕ್ಕೆ ನೀರು ಕಲ್ಪಿಸಿದ್ದೆ. ಈಗ ನನ್ನ ಅವಧಿಯಲ್ಲೇ ಜಂಟಿ ಸರ್ವೇ ನಡೆದರೆ ಒಳ್ಳೆಯದು. ಒಕ್ಕೂಟ ವ್ಯವಸ್ಥೆಯಲ್ಲಿದ್ದು, ಅವರ ವಾದ ಅವರು ಮಂಡಿಸಲಿ. ಆದರೆ, ನಮ್ಮ ಜಾಗವನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದರು.ನಾವು ನೀರು ಕುಡಿದ ಬಳಿಕ ಅವರು ನೀರು ಕುಡಿಯುತ್ತಿದ್ದಾರೆ. ಅವರು ಕುಡಿದು ಬಿಟ್ಟಿದ್ದನ್ನು ನಾವು ಕುಡಿಯುತ್ತಿಲ್ಲ. ಆದ್ದರಿಂದ, ನಮ್ಮ ರಾಜ್ಯದ ಜಾಗವನ್ನು ಕಬಳಿಸಲು ನಾವು ಬಿಡುವುದಿಲ್ಲ ಎಂದು ಸಚಿವ ಸೋಮಣ್ಣ ಗುಡುಗಿದರು.