ಬೆಂಗಳೂರು: “ನನ್ನ ಸರ್ಕಾರ ಸಮಾಜದ ದುರ್ಬಲ ವರ್ಗಗಳು ವಿಶೇಷವಾಗಿ ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿಗಳ ಜೀವನದ ಹಾಗೂ ಆರ್ಥಿಕತೆಯ ಎಲ್ಲಾ ಹಂತಗಳಲ್ಲಿ ತಮ್ನ ನ್ಯಾಯಬದ್ಧ ಹಕ್ಕನ್ನು ಪಡೆದುಕೊಳ್ಳಲು ಸಮರ್ಥಗೊಳಿಸುವುದಕ್ಕೆ ಸಂಪೂರ್ಣ ಬದ್ಧವಾಗಿದೆ ಎಂದು ರಾಜ್ಯಪಾಲ ತಾವರಚಂದ್ ಗೆಹ್ಲೋತ್ ಹೇಳಿದ್ದಾರೆ.
ದೇಶದ 73ನೇ ಗಣರಾಜ್ಯೋತ್ಸದ ಪ್ರಯುಕ್ತ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ನಾಡಿನ ಜನತೆಯನ್ನುದ್ದೇಶಿಸಿ ಅವರು ಭಾಷಣ ಮಾಡಿದರು.
ಗಣರಾಜ್ಯೋತ್ಸವ ಉತ್ಸವ ಹಾಗೂ ಮಾನವೀಯ ಸಂದೇಶ ಒಳಗೊಂಡಿದೆ. ಸರ್ಕಾರವು ಕೋವಿಡ್ 19 ಸಮರ್ಥವಾಗಿ ಎದುರಿಸಿದೆ. ಸರ್ಕಾರದ ಕಾರ್ಯ ಪ್ರಶಂಸನೀಯವಾಗಿದೆ. ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ಅತಿವೃಷ್ಟಿ, ಪ್ರವಾಹದ ಸಂದರ್ಭದಲ್ಲಿ ಸರ್ಕಾರ ಸಂತ್ರಸ್ತರ ನೆರವಿಗೆ ಧಾವಿಸಿದೆ. ಸರ್ಕಾರ ಕೃಷಿಗೆ ಒತ್ತು ನೀಡಿದೆ. 2021-22ನೇ ಸಾಲಿನಲ್ಲಿ 1,472 ಕೋಟಿ ರೂ. ಮೊತ್ತದ ಜಲಾನಯನ ಅಭಿವೃದ್ದಿ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಪ್ರಸಕ್ತ ಸಾಲಿನಲ್ಲಿ 12.76. ಲಕ್ಷ ರೈತರು ಬೆಳೆ ಸಮೀಕ್ಷೆಯಡಿ ನೋಂದಾಯಿಸಿಕೊಂಡಿದ್ದಾರೆ. ರೈತರ ಮಕ್ಕಳ ಶಿಕ್ಷಣ ಪ್ರೋತ್ಸಾಹ ಯೋಜನೆಯಡಿ 4.41 ಕೋಟಿ ರೂ. ಮೊತ್ತವನ್ನು 16 ಸಾವಿರ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಲಾಗಿದೆ ಎಂದರು.