ಇನ್ನು ಮುಂದೆ ಹಾಫ್ ಹೆಲ್ಮೆಟ್ ಹಾಕಿ ರಸ್ತೆಗಿಳಿಯೋ ಹಾಗಿಲ್ಲ । ಪೊಲೀಸರಿಂದ ಖಡಕ್ ಎಚ್ಚರಿಕೆ !

Prasthutha|

ಬೆಂಗಳೂರು: ದ್ವಿಚಕ್ರ ವಾಹನ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಟ್ರಾಫಿಕ್ ನಿಯಮಗಳನ್ನು ಮತ್ತಷ್ಟು ಬಿಗಿ ಗೊಳಿಸಲು ಬೆಂಗಳೂರು ಟ್ರಾಫಿಕ್ ಪೊಲೀಸರು ಮುಂದಾಗಿದ್ದಾರೆ.

- Advertisement -

ಪೊಲೀಸರ ದಂಡದಿಂದ ತಪ್ಪಿಸಿಕೊಳ್ಳಲು ದ್ವಿಚಕ್ರ ವಾಹನ ಸವಾರರು ಹೆಚ್ಚಾಗಿ ಹಾಫ್ ಹೆಲ್ಮೆಟ್ ಧರಿಸುತ್ತಾರೆ. ಆದರೆ ಇನ್ಮುಂದೆ ಹಾಫ್ ಹೆಲ್ಮೆಟ್ ಹಾಕಿ ರಸ್ತೆಗಿಳಿಯೋ ಹಾಗಿಲ್ಲ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದು, ರೂಲ್ಸ್ ಬ್ರೇಕ್ ಮಾಡಿದವರಿಗೆ ದಂಡದ ವಿಧಿಸುವುದರ ಜೊತೆ ಹಾಫ್ ಹೆಲ್ಮೆಟ್ ಗಳನ್ನು ವಶಕ್ಕೆ ಪಡೆದು ನಾಶ ಮಾಡಲಿದ್ದಾರೆ ಎಂದು ಹೇಳಲಾಗಿದೆ.

ಐಎಸ್‌ಐ ಮುದ್ರೆ ಇರೋ ಸಂಪೂರ್ಣ ಕವರ್ ಆಗೋ ಹೆಲ್ಮೆಟ್’ಗಳನ್ನ ಪ್ರತಿಯೊಬ್ಬರು ಧರಿಸಬೇಕು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.

- Advertisement -

ಈ ರೀತಿಯಾಗಿ ಬೆಂಗಳೂರು ಸಂಚಾರಿ ಪೊಲೀಸರು, ಬೈಕ್ ಸವಾರರು ಧರಿಸಿದ್ದ ಗುಣಮಟ್ಟದ್ದಲ್ಲದ ಹೆಲ್ಮೆಟ್ಗಳನ್ನು ವಶಕ್ಕೆ ಪಡೆದಿದ್ದಾರೆ. ಅಂಥ ಹೆಲ್ಮೆಟ್ ಗಳನ್ನು ಕುಮಾರಸ್ವಾಮಿ ಲೇಔಟ್ ಸಂಚಾರ ಠಾಣೆ ಪೊಲೀಸರು ರಸ್ತೆಯಲ್ಲಿ ಸಾಲಾಗಿ ಜೋಡಿಸಿಟ್ಟು, ಅದರ ಮೇಲೆ ಕಾಂಕ್ರೀಟ್ ಮಿಕ್ಸರ್ ಲಾರಿಯೊಂದು ಹರಿಸಿ ನಾಶಗೊಳಿಸಿದ್ದಾರೆ.

ಇದು ಗುಣಮಟ್ಟದ್ದಲ್ಲದ ಹೆಲ್ಮೆಟ್ಗಳ ಕುರಿತು ಜಾಗೃತಿ ಅಭಿಯಾನ. ಎಲ್ಲ ಸವಾರರು ತಮ್ಮ ಸುರಕ್ಷತೆಗಾಗಿ ಗುಣಮಟ್ಟದ ಹೆಲ್ಮೆಟ್ಗಳನ್ನೇ ಬಳಸಿ ಎಂದು ಈ ವಿಡಿಯೋ ಸಹಿತ ಡಿಸಿಪಿ ಕುಲದೀಪ್ ಕುಮಾರ್ ಜೈನ್ ಟ್ವೀಟ್ ಮಾಡಿಕೊಂಡಿದ್ದಾರೆ.

ಪೊಲೀಸರ ಈ ನಡೆಗೆ ಸಾರ್ವಜನಿಕರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಅಷ್ಟಕ್ಕೂ ನಿಮಗೆ ಸವಾರರ ಕುರಿತು ಅಷ್ಟು ಕಾಳಜಿ ಇದ್ದರೆ ಮೊದಲು ಇಂಥ ಹೆಲ್ಮೆಟ್ಗಳ ಉತ್ಪಾದನೆ ಹಾಗೂ ಮಾರಾಟ ಆಗದಂತೆ ನೋಡಿಕೊಳ್ಳಿ. ಗುಣಮಟ್ಟದ ರಸ್ತೆ ಒದಗಿಸಿ, ರಸ್ತೆ ಗುಂಡಿ ಮುಚ್ಚಿಸಿ ಎಂದು ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.



Join Whatsapp