ಮಂಗಳೂರು: ನಾರಾಯಣ ಗುರುಗಳು ಜಾತಿ ಮತ ಭೇದಗಳನ್ನು ಮೀರಿದವರು. ನಾರಾಯಣ ಗುರುಗಳನ್ನು ಅವಮಾನಿಸುವ ಕೆಲಸವನ್ನು ಸ್ತಬ್ಧ ಚಿತ್ರದ ಮೂಲಕ ಮೋದಿ ಸರಕಾರ ಮಾಡಿದೆ. ಆದ್ದರಿಂದ ಎಲ್ಲ ಗುರು ಅನುಯಾಯಿಗಳು ಜನವರಿ 26ರ ಗಣರಾಜ್ಯೋತ್ಸವ ದಿನದಂದು ಸಾಧ್ಯವಿರುವ ಎಲ್ಲಾ ಕಡೆ ಈ ಸ್ವಾಭಿಮಾನ ಯಾತ್ರೆಯಲ್ಲಿ ಭಾಗವಹಿಸಬೇಕು ಎಂದು ಕಾಂಗ್ರೆಸ್ ನಾಯಕ ಬಿ. ಕೆ. ಹರಿಪ್ರಸಾದ್ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾರಾಯಣ ಗುರುಗಳು ನಮಗೂ ಗುರು ಎಂದ ಸಂಘ ಪರಿವಾರದವರು ಸ್ತಬ್ಧ ಚಿತ್ರ ವಿಷಯದಲ್ಲಿ ನಾಟಕ ಮಾಡಿದ್ದೇಕೆ? ಎಸ್ ಎನ್ ಡಿಪಿಯನ್ನು ಒಡೆದು ಬಿಜೆಪಿಯು ಕೇರಳದಲ್ಲಿ ಭಾರೀ ರಾಜಕೀಯ ಮಾಡಿತು. ಆದರೆ ನಾರಾಯಣ ಗುರುಗಳ ತತ್ವದ ಕಾರಣದಿಂದ ಬಿಜೆಪಿಗೆ ಕೇರಳದಲ್ಲಿ ಕಾಲೂರಲು ಸಾಧ್ಯವಾಗಲಿಲ್ಲ ಎಂದು ಹರಿಪ್ರಸಾದ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ತಮಿಳುನಾಡಿನ ಟ್ಯಾಬ್ಲೊ ಸ್ವಾತಂತ್ರ್ಯ ಹೋರಾಟಗಾರರಾದ ವೀರಪಾಂಡ್ಯ ಕಟ್ಟಬೊಮ್ಮನ್, ಭಾರತೀಯಾರ್ ಮೊದಲಾದವರನ್ನು ಒಳಗೊಂಡಿತ್ತು. ಆದರೆ ತಮಿಳುನಾಡಿನ ಮಣ್ಣು ಬಿಜೆಪಿಗೆ ನೆಲೆ ನೀಡಿಲ್ಲ. ಅದಕ್ಕಾಗಿಯೇ ಅಲ್ಲಿನ ಸ್ತಬ್ಧ ಚಿತ್ರ ಸಹ ತಿರಸ್ಕರಿಸಲಾಗಿದೆ. ವಿಚಿತ್ರವೆಂದರೆ ಹಿಂದೆ ಕರ್ನಾಟಕ ಕಳುಹಿಸಿದ್ದ ಟಿಪ್ಪು ಸುಲ್ತಾನ್ ಟ್ಯಾಬ್ಲೋವನ್ನು ಕೇಂದ್ರ ಒಪ್ಪಿತ್ತು. ಬಿಜೆಪಿಯ ಈ ಡಬಲ್ ಸ್ಟ್ಯಾಂಡರ್ಡ್ ಏಕೆ ಎಂದು ಹರಿಪ್ರಸಾದ್ ಪ್ರಶ್ನಿಸಿದರು.
ಪಶ್ಚಿಮ ಬಂಗಾಳದ ಸುಭಾಷ್ ಚಂದ್ರ ಬೋಸ್ ರ ಟ್ಯಾಬ್ಲೊ ಸಹ ನಿರಾಕರಿಸಲಾಗಿದೆ. ಸಂಸ್ಕೃತಕ್ಕೆ 360 ಕೋಟಿ ರೂಪಾಯಿ, ಕನ್ನಡಕ್ಕೆ 3 ಕೋಟಿ ರೂಪಾಯಿ ನೀಡುವ ಬಿಜೆಪಿ ಸದಾ ಜಾತೀಯತೆಯ ಮೇಲೆ ನಿಂತಿದೆ. ಈ ವಿಷಯದಲ್ಲಿ ಹಿರಿಯ ನಾಯಕ ಜನಾರ್ದನ ಪೂಜಾರಿಯವರ ಮಾತು ಅನುಸರಿಸಬೇಕು ಎಂದು ಸಹ ಬಿಕೆಎಚ್ ಹೇಳಿದರು.
ನಾರಾಯಣ ಗುರುಗಳ ವಿರುದ್ಧದ ಸಂಘ ಪರಿವಾರದವರು ನಮ್ಮ ಸ್ವಾಭಿಮಾನದ ಜಾಥಾ ತಡೆಯಲು ಬಂದರೆ, ಅವರನ್ನು ದಾಟಿ ನಡೆಯುವ ಶಕ್ತಿ ನಮಗಿದೆ ಎಂದು ಹರಿಪ್ರಸಾದ್ ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಯು. ಟಿ. ಖಾದರ್, ಐವಾನ್ ಡಿಸೋಜಾ, ರಕ್ಷಿತ್ ಶಿವರಾಂ, ಇಬ್ರಾಹಿಮ್ ಕೋಡಿಜಾಲ್, ಹರೀಶ್ ಕುಮಾರ್, ಲುಕ್ಮಾನ್, ವಿಶ್ವಾಸ್ ದಾಸ್ ಮೊದಲಾದವರು ಉಪಸ್ಥಿತರಿದ್ದರು.