ರಾಜ್ಯದ 7 ಸ್ಮಾರ್ಟ್ ಸಿಟಿಗಳ ಎಲ್ಲಾ ಕಾಮಗಾರಿಗಳು 2023ರ ಮಾರ್ಚ್ ಅಂತ್ಯಕ್ಕೆ ಪೂರ್ಣ: ಸಚಿವ ಬೈರತಿ ಬಸವರಾಜ

Prasthutha|

ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ನಾನು ನಗರಾಭಿವೃದ್ಧಿ ಸಚಿವನಾಗಿ ಅಧಿಕಾರ ವಹಿಸಿಕೊಂಡ ಬಳಿಕ ರಾಜ್ಯದ 7 ಸ್ಮಾರ್ಟ್ ಸಿಟಿ ಕಾಮಗಾರಿಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಂಡಿದೆ ಎಂದು ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ (ಬೈರತಿ) ಹೇಳಿದ್ದಾರೆ.

- Advertisement -

ಬೆಂಗಳೂರಿನ ವಿಕಾಸ ಸೌಧದಲ್ಲಿ ಇಂದು ಬೆಳಿಗ್ಗೆ ರಾಜ್ಯದ 7 ಸ್ಮಾರ್ಟ್ ಸಿಟಿಗಳಾದ ಶಿವಮೊಗ್ಗ, ಮಂಗಳೂರು, ಬೆಂಗಳೂರು, ತುಮಕೂರು, ದಾವಣಗೆರೆ, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಸ್ಮಾರ್ಟ್ ಸಿಟಿಗಳಲ್ಲಿ ನಡೆದಿರುವ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಬಿ.ಎ. ಬಸವರಾಜ (ಬೈರತಿ) ಅವರು, 2020 ರ ಫೆಬ್ರವರಿ ವೇಳೆಗೆ ರೂ.855 ಕೋಟಿ ರೂಪಾಯಿಗಳ ಕಾಮಗಾರಿಗಳು ನಡೆದಿತ್ತು. ಅಲ್ಲಿಂದ ಇಲ್ಲಿಯವರೆಗೆ ರೂ. 2646 ಕೋಟಿ ರೂಪಾಯಿಗಳ ಕಾಮಗಾರಿಗಳು ನಡೆದಿವೆ ಎಂದರು.

ರಾಜ್ಯದ 7 ಸ್ಮಾರ್ಟ್ ಸಿಟಿಗಳ ಎಲ್ಲಾ ಕಾಮಗಾರಿಗಳು 2023ರ ಜುಲೈ ಅಂತ್ಯಕ್ಕೆ ಮುಗಿಯಬೇಕು ಎಂದು ಕೇಂದ್ರ ಸರ್ಕಾರ ಗಡುವು ನೀಡಿದೆ. ಆದರೆ, ನಮ್ಮ ನಗರಾಭಿವೃದ್ಧಿ ಇಲಾಖೆ 2023ರ ಮಾರ್ಚ್ ಅಂತ್ಯಕ್ಕೆ ಮುಗಿಸುವ ಬಗ್ಗೆ ತೀರ್ಮಾನಿಸಿದ್ದೇವೆ ಎಂದು ಹೇಳಿದರು.

- Advertisement -

ನಗರಾಭಿವೃದ್ಧಿ ಸಚಿವನಾಗಿ ಅಧಿಕಾರ ವಹಿಸಕೊಂಡ ಮೇಲೆ ರಾಜ್ಯದ ಸ್ಮಾರ್ಟ್ ಸಿಟಿಗಳ ಕಾಮಗಾರಿಗಳ ವೀಕ್ಷಣೆ ಮತ್ತು ಪ್ರಗತಿ ಪರಿಶೀಲನೆಗಾಗಿ ನಾನು ಪ್ರತಿ ನಗರಕ್ಕೆ 8-10 ಬಾರಿ ಭೇಟಿ ನೀಡಿದ್ದೇನೆ. ಕಾಮಗಾರಿಗಳ ವೇಗ ಹೆಚ್ಚಿಸಲು ಎಲ್ಲಾ ರೀತಿಯ ಕ್ರಮ ಕೈಗೊಂಡಿದ್ದೇನೆ. ಕಾಮಗಾರಿಗಳ ಗುಣಮಟ್ಟ ಕಾಪಾಡಲು (Quality Control Check Team) ಕೆಲಸ ಮಾಡುತ್ತಿದೆ. ಇದರ ಜೊತೆಗೆ ಪ್ರತಿ ತಿಂಗಳು ನಾನು ಪರಿಶೀಲನಾ ಸಭೆ (Review Meeting) ನಡೆಸುತ್ತಿದ್ದೇನೆ ಎಂದರು.

ಸ್ಮಾರ್ಟ್ ಸಿಟಿ ಕಾಮಗಾರಿಗಳ ಟೆಂಡರ್ ಕರೆಯುವುದರಲ್ಲಿ ನಮ್ಮ ರಾಜ್ಯ ದೇಶದಲ್ಲಿ 2ನೇ ಸ್ಥಾನದಲ್ಲಿದೆ ಮತ್ತು ಕಾಮಗಾರಿಗಳಿಗೆ ಕಾರ್ಯಾದೇಶ ನೀಡುವಲ್ಲಿ 4ನೇ ಸ್ಥಾನದಲ್ಲಿದೆ. ಕೊರೋನಾ ಸೋಂಕು, ಲಾಕ್ ಡೌನ್, ಕಾರ್ಮಿಕರ ವಲಸೆ/ಅಭಾವ ಹೀಗೆ 2 ವರ್ಷಗಳು ಸಮಸ್ಯೆ ಎದುರಿಸಿದ್ದರೂ, ಕಾಮಗಾರಿಗಳಿಗೆ ಹಣಕಾಸಿನ ವೆಚ್ಚ ಏರಿಕೆಯಾಗಿಲ್ಲ. ಬದಲಾಗಿ, ಕಾಮಗಾರಿಗಳು ಪೂರ್ಣಗೊಳ್ಳುವುದರ ಕಾಲಮಿತಿ ಹೆಚ್ಚಾಗಿತ್ತು. ಹೀಗಿದ್ದರೂ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ಬಿ.ಎ. ಬಸವರಾಜ ತಿಳಿಸಿದರು.

ರಾಜ್ಯದ ಇತರೆ ನಾಲ್ಕು ಮಹಾನಗರಗಳಾದ ಮೈಸೂರು, ಬಳ್ಳಾರಿ, ಕಲಬುರಗಿ ಮತ್ತು ವಿಜಯಪುರವನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಸೇರಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಪತ್ರ ಬರೆಯಲಾಗಿದೆ. ಇದರ ಜೊತೆಗೆ ಇತ್ತೀಚೆಗೆ ಉತ್ತರ ಪ್ರದೇಶದ ಲಕ್ನೋ ಗೆ ತೆರಳಿದ್ದ ವೇಳೆ ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ವ್ಯವಹಾರಗಳ ಸಚಿವ ಹರದೀಪ್ ಸಿಂಗ್ ಪುರಿ ಯವರೊಂದಿಗೂ ಮಾತನಾಡಿದ್ದೇನೆ ಎಂದು ತಿಳಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡಿರುವ ಅನುದಾನ ಬಳಕೆಯಲ್ಲಿ ಎಲ್ಲಿಯೂ ಲೋಪವಾಗಿಲ್ಲ, ಅದನ್ನು ಸದ್ಭಳಕೆ ಮಾಡಿಕೊಂಡಿದ್ದೇವೆ. ಪ್ರಸ್ತಕ ವರ್ಷದಲ್ಲಿ ಮಳೆಗಾಲ ಶುರುವಾಗುವ ಮೊದಲೇ ಹೆಚ್ಚು ಪ್ರಗತಿಯನ್ನು ಹೊಂದುತ್ತೇವೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.



Join Whatsapp