ಢಾಕಾ; ಬಾಂಗ್ಲಾದೇಶ ಪ್ರೀಮಿಯರ್ ಲೀಗ್- ಬಿಪಿಎಲ್ -2022 ಆವೃತ್ತಿಯ ಮೊದಲನೇ ದಿನವೇ ಕ್ರಿಕೆಟ್ ಇತಿಹಾಸದಲ್ಲಿಯೇ ಅತ್ಯಂತ ಅಪರೂಪದ ರನೌಟ್’ಗೆ ಸಾಕ್ಷಿಯಾಗಿದೆ.ಈ ದುರಾದೃಷ್ಟಕರ ರನೌಟ್’ಗೆ ಬಲಿಯಾಗಿದ್ದು ವಿಂಡೀಸ್’ನ ದೈತ್ಯ ಬ್ಯಾಟರ್ ಆಂಡ್ರೆ ರಸೆಲ್ !
ಕುಲ್ನಾ ಟೈಗರ್ಸ್ ಹಾಗೂ ಢಾಕಾ ಪ್ಲಾಟೂನ್ ತಂಡಗಳ ನಡುವೆ ನಡೆದ ಉದ್ಘಾಟನಾ ದಿನದ ಎರಡನೇ ಪಂದ್ಯದಲ್ಲಿ ಕುಲ್ನಾ ಟೈಗರ್ಸ್ ತಂಡದ ರಸೆಲ್ ರನೌಟ್ ಆದ ರೀತಿ ಕ್ರಿಕೆಟ್ ಜಗತ್ತಿನಲ್ಲಿ ಇದೀಗ ಚರ್ಚೆಯಾಗುತ್ತಿದೆ.ಮೊದಲ ಇನ್ನಿಂಗ್ಸ್’ನಲ್ಲಿ ತಿಸಾರ ಪೆರೆರಾ ಎಸೆದ 15ನೇ ಓವರ್’ನ ಅಂತಿಮ ಎಸೆತವನ್ನು, ಸ್ಟ್ರೈಕ್ ನಲ್ಲಿದ್ದ ರಸೆಲ್, ಶಾರ್ಟ್ ಥರ್ಡ್ ಮ್ಯಾನ್ ಕಡೆಗೆ ತಳ್ಳಿ ಒಂಟಿ ರನ್ ತೆಗೆಯಲು ಪ್ರಯತ್ನಿಸಿದರು.
ಕ್ಷೇತ್ರರಕ್ಷಣೆಯಲ್ಲಿದ್ದ ಮೆಹ್ದಿ ಹಸನ್ ಚೆಂಡನ್ನು ಸ್ಟ್ರೈಕ್ ವಿಕೆಟ್’ಅನ್ನು ಗುರಿಯಾಗಿಸಿ ಎಸೆದರು. ಚೆಂಡು ವಿಕೆಟ್’ಗೆ ಬಡಿಯಿತಾದರೂ, ಈ ವೇಳೆ ನಾನ್ ಸ್ಟ್ರೈಕ್’ನಲ್ಲಿದ್ದ ಮಹ್ಮೂದುಲ್ಲಾ ವೇಗವಾಗಿ ಓಡಿ ರನ್ ಪೂರ್ತಿಗೊಳಿಸಿದ್ದರು. ಆದರೆ ಸ್ಟ್ರೈಕ್ ಕಡೆಯ ವಿಕೆಟ್’ಗೆ ಬಡಿದ ಚೆಂಡು ಬೇಲ್ಸ್’ನ್ನು ಹಾರಿಸಿ ಮುಂದುವರಿದು ನಾನ್ ಸ್ಟ್ರೈಕ್ ತುದಿಯಲ್ಲಿದ್ದ ವಿಕೆಟ್ ಬೇಲ್ಸ್’ನ್ನು ಕೂಡ ಹಾರಿಸಿತ್ತು. ಅಪಾಯವೇನಿದ್ದರೂ ಮಹ್ಮೂದುಲ್ಲಾಗೆ ಎಂದು ತಿರುಗಿ ನೋಡುತ್ತಲೇ ನಿಧಾನವಾಗಿ ರನ್ ಓಡುತ್ತಿದ್ದ ರಸೆಲ್ ಕ್ರೀಸ್ ತಲುಪುವ ಮುನ್ನವೇ ಚೆಂಡು ವಿಕೆಟ್’ನ್ನು ‘ಚುಂಬಿಸಿ’ ಆಗಿತ್ತು !
ಆ ಮೂಲಕ ಕೇವಲ 7 ರನ್’ಗಳಿಸಿದ್ದ ರಸೆಲ್ ನಂಬಲಾಗದ ರೀತಿಯಲ್ಲಿ ರನೌಟ್ ಆಗಿ ಪೆವಿಲಿಯನ್ ಕಡೆ ನಡೆದರು.
ಅಂತಿಮವಾಗಿ ಈ ಪಂದ್ಯದಲ್ಲಿ ಕುಲ್ನಾ ಟೈಗರ್ಸ್ 5 ವಿಕೆಟ್’ಗಳಿಂದ ಜಯಭೇರಿ ಬಾರಿಸಿತು.
ಮೊದಲು ಬ್ಯಾಟ್ ಮಾಡಿದ್ದ ಢಾಕಾ ಪ್ಲಾಟೂನ್ ನಿಗದಿತ20 ಓವರ್’ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 183 ರನ್ ಗಳಿಸಿದರೆ, ಚೇಸಿಂಗ್ ವೇಳೆ ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ ಕುಲ್ನಾ ಟೈಗರ್ಸ್ ಗುರಿ ತಲುಪಿತು.