ಇನ್ಸ್ ಪೆಕ್ಟರ್ ವಸಂತ್ ಕುಮಾರ್ ವಿರುದ್ಧ ಮತ್ತೆ ಇಬ್ಬರು ಮಹಿಳೆಯರು ದೂರು

Prasthutha|

ಬೆಂಗಳೂರು: ಇತ್ತೀಚಿಗೆ ದೂರುದಾರೆ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಗಂಭೀರ ಆರೋಪಕ್ಕೆ ಸಿಲುಕಿರುವ ಹೆಣ್ಣೂರು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ವಸಂತ್ ಕುಮಾರ್ ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿದ್ದು, ನಗರದ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಮತ್ತೊಂದು ದೂರು ನೀಡಲಾಗಿದೆ.
ತಮ್ಮ ಮೇಲೆ ದುಷ್ಕರ್ಮಿಗಳು ಗಂಭೀರ ಹಲ್ಲೆ ನಡೆಸಿದರೂ, ಯಾವುದೇ ಕ್ರಮ ಕೈಗೊಳ್ಳದೆ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಆರೋಪಿಸಿ ಮಹಿಳೆಯರಿಬ್ಬರು ದೂರು ಸಲ್ಲಿಸಿದ್ದಾರೆ.
ನಗರದ ಕಮ್ಮನಹಳ್ಳಿಯ ಎರಡನೇ ಬ್ಲಾಕ್ ನಿವಾಸಿ ವಾಣಿ ಹಾಗೂ ವಲರಾಮತಿ ಎಂಬುವರು ದೂರು ಸಲ್ಲಿಕೆ ಮಾಡಿದ್ದು, ಹಲ್ಲೆ ನಡೆಸಿದ ದುಷ್ಕರ್ಮಿಗಳ ಪರವಾಗಿ ನಿಂತಿರುವ ನಗರದ ಹೆಣ್ಣೂರು ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ವಸಂತ್ ಕುಮಾರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳವಂತೆ ಅವರು ಮನವಿ ಮಾಡಿದ್ದಾರೆ.
ಕಳೆದ ವರ್ಷದ ಏ.26ರಂದು ಸ್ಥಳೀಯ ಬಿಜೆಪಿ ನಾಯಕ ಕೃಷ್ಣ ಆನಂದ್, ಸರಿತಾ ಬಾಯಿ, ಪುಪ್ಪಾ, ಮಹೇಂದ್ರ, ಲತಾ ಎಂಬುವರು ಸೇರಿದಂತೆ ನಲ್ವತ್ತು ಮಂದಿ ನಿವೇಶನ ಕುರಿತು ವಿಚಾರವಾಗಿ ಉದ್ದೇಶಪೂರಕವಾಗಿ ಮನೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಹಲವು ಚಿನ್ನಾಭರಣ, ನಗದು ಹಾಗೂ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರು.
ಈ ಸಂಬಂಧ ಹೆಣ್ಣೂರು ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿತ್ತು. ಆದರೆ, ಇದುವರೆಗೂ ಯಾವುದೇ ಕ್ರಮವೂ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಹಲ್ಲೆ ನಡೆಸಿದ ಆರೋಪಿಗಳೊಂದಿಗೆ ಹೆಣ್ಣೂರು ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ವಸಂತ್ ಕುಮಾರ್ ಜತೆಗೂಡಿ ಇದುವರೆಗೂ ಎಫ್ ಐಆರ್ ಸಹ ದಾಖಲು ಮಾಡಿಲ್ಲ.ಈ ಬಗ್ಗೆ ಪ್ರಶ್ನಿಸಿದರೆ, ನ್ಯಾಯಾಲಯದ ಆದೇಶದ ತೆಗೆದುಕೊಂಡು ಬನ್ನಿ ಎಂದು ಗದರಿಸಿ ಕಳುಹಿಸಿದರು ಎಂದು ವಾಣಿ ಹೇಳಿದರು.
ಸಣ್ಣ ಖಾಲಿ ನಿವೇಶನಯೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸಲಾಗುತ್ತಿದೆ. ಆದರೆ, ಕೆಲ ರಿಯಲ್ ಎಸ್ಟೇಟ್ ಏಜೆಂಟ್ಗಳೊಂದಿಗೆ ಪೊಲೀಸರೇ ಶಾಮೀಲಾಗಿ, ಕಾನೂನು ವ್ಯವಸ್ಥೆಯನ್ನೇ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಈ ಸಂಬಂಧ ನಗರ ಪೊಲೀಸ್ ಆಯುಕ್ತರು ಕ್ರಮ ಕೈಗೊಂಡು, ತಮಗೆ ಪೊಲೀಸ್ ರಕ್ಷಣೆ ನೀಡಬೇಕು ಎಂದು ಅವರು ಆಗ್ರಹಿಸಿದರು.



Join Whatsapp