ಚಿಕ್ಕಮಗಳೂರು: ಕರ್ನಾಟಕ ಎಲ್ಲಾ ಭಾಷೆ-ಧರ್ಮ-ಸಮುದಾಯದ ರಾಜ್ಯ. ನಾವು ಬೆಂಗಳೂರಿಗೆ ಹೋದರೆ ತುಂಬಾ ಜಾಗಗಳಲ್ಲಿ ಕನ್ನಡ ಕೇಳಿಸುವುದಿಲ್ಲ ಆದರೂ ಸಹಿಸಿಕೊಂಡಿದ್ದೇವೆ. ಸಂಸ್ಕೃತ ಎಲ್ಲಾ ಭಾಷೆಗಳಿಗೂ ಮೂಲ ಭಾಷೆ. ಮಾತೃ ಭಾಷೆ. ಸಂಸ್ಕೃತ ಕಲಿಯುವುದು ತುಂಬ ಅಗತ್ಯವಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ನಗರದ ಸಂಸದರ ಕಚೇರಿಯಲ್ಲಿ ಮಾತನಾಡಿದ ಅವರು, ಸಂಸ್ಕೃತದಿಂದ ಹಲವು ವಿಚಾರಗಳನ್ನು ಕಲಿಯಬಹುದು. ನಮ್ಮ ಭಾಷೆಯನ್ನು ಬೆಳೆಸಲು ಏನು ಬೇಕೋ ಅದನ್ನು ಮಾಡೋಣ. ಇನ್ನೊಂದು ಭಾಷೆ ಬೇಡ ಅನ್ನುವಂತದ್ದು ಸರಿಯಲ್ಲ. ಸರ್ಕಾರ ಇದನ್ನು ಯಾವ ದೃಷ್ಠಿಕೋನದಿಂದ ಮಾಡಿದೆಯೋ ಗೊತ್ತಿಲ್ಲ. ಕನ್ನಡದ ಜೊತೆ ಬೇರೆ ಭಾಷೆಗಳಿಗೂ ಆದ್ಯತೆ ಸಿಗಬೇಕು. ಇದು ನಮ್ಮ ಕರ್ನಾಟಕ. ವಿವಿಧತೆಯಲ್ಲಿ ಏಕತೆಯ ದೇಶ ಹೇಗೋ ಅದೇ ರೀತಿ ನಮ್ಮ ಕರ್ನಾಟಕ ಕೂಡ ವಿವಿಧತೆಯಲ್ಲಿ ಏಕತೆಯ ರಾಜ್ಯ. ಅವರಿಗೂ ಆದ್ಯತೆ ಸಿಗಲಿ. ನಮಗೆ ಇನ್ನೂ ಹೆಚ್ಚಿನ ಆದ್ಯತೆ ಸಿಗಲಿ. ನಾವು ಯಾವುದೇ ವರ್ಗವನ್ನ ಓಲೈಕೆ ಮಾಡುವುದಿಲ್ಲ ಎಂದಿದ್ದಾರೆ
ಯಾವ ಭಾಷೆ ಕೂಡ ಒಂದು ಜಾತಿಯ ಭಾಷೆ ಅಲ್ಲ. ಉರ್ದು ಒಂದು ಜಾತಿಯ ಭಾಷೆ ಇರಬಹುದು. ಉಳಿದಂತೆ ಭಾರತದ ದೇಶೀಯ ಭಾಷೆಗಳು ಯಾವುದೋ ಒಂದು ಜಾತಿಯ ಭಾಷೆ ಅಲ್ಲ. ಯಾವುದೇ ಧರ್ಮದ ಭಾಷೆ ಅಲ್ಲ. ಎಲ್ಲರ ಭಾಷೆ. ಎಲ್ಲಾ ಜಾತಿಯವರು ಎಲ್ಲಾ ಭಾಷೆಯನ್ನು ಕಲಿಯಬಹುದು. ಇಂದು ಸಂಸ್ಕೃತವನ್ನ ಕೇವಲ ಮೇಲ್ವರ್ಗದ ಜನ ಮಾತ್ರ ಕಲಿತಿಲ್ಲ. ಎಲ್ಲಾ ವರ್ಗದ ಜನ, ಮಠ, ಸ್ವಾಮೀಜಿಗಳು ಸಂಸ್ಕೃತ ಪಾಠ ಶಾಲೆ ಇಟ್ಟುಕೊಂಡಿದ್ದಾರೆ. ಸಂಸ್ಕೃತ ಕಲಿತರೆ ಬೇರೆ-ಬೇರೆ ಅಧ್ಯಯನ ಮಾಡಬಹುದು. ಯೋಗ, ಆಯುರ್ವೇದ, ಹಿಂದೆ ಹೇಗಿತ್ತು. ತಂತ್ರಜ್ಞಾನ ಏನು ಎಲ್ಲವನ್ನೂ ತಿಳಿದುಕೊಳ್ಳಬಹುದು. ಸಂಸ್ಕೃತ ಯಾವುದೇ ಒಂದು ಜಾತಿ-ಭಾಷೆ-ಧರ್ಮಕ್ಕೆ ಸೀಮಿತವಾಗಿಲ್ಲ. ಸಂಕುಚಿತ ದೃಷ್ಟಿಕೋನದಿಂದ ಇದನ್ನು ಯೋಚಿಸಬಾರದು. ಎಲ್ಲರೂ ಕಲಿಯಲು ಅವಕಾಶವಿದೆ. ಎಲ್ಲರೂ ಕಲಿಯಬಹುದು ಎಂದು ಹೇಳಿದ್ದಾರೆ.