ಮುಂಬೈ; ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದೂರುದಾರನಿಗೆ ಖಡಕ್ ಪ್ರತಿಕ್ರಿಯೆ ಕೊಟ್ಟಿರುವ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್, ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ನನ್ನ ಧರ್ಮವನ್ನು ಎಳೆದು ತರಬೇಡಿ. ನನ್ನ ತಾಯಿ ಹಿಂದು, ತಂದೆ ಮುಸ್ಲಿಂ. ನನ್ನ ಸಹೋದರರು ಹಿಂದೂ ಧರ್ಮೀಯರನ್ನು ವಿವಾಹವಾಗಿದ್ದಾರೆ. ನನ್ನ ಮನೆಯಲ್ಲಿ ಎಲ್ಲಾ ಹಬ್ಬಗಳನ್ನು ಆಚರಿಸಲಾಗುತ್ತದೆ ಎಂದಿದ್ದಾರೆ.
ನವೀ ಮುಂಬೈ ಸಮೀಪದ ಪಾನ್ವೆಲ್ ಪ್ರದೇಶದಲ್ಲಿ ಸಲ್ಮಾನ್ ಖಾನ್ ಫಾರ್ಮ್ಹೌಸ್ ಹೊಂದಿದ್ದಾರೆ. ಈ ಜಾಗದ ಪಕ್ಕದಲ್ಲಿಯೇ ಕೇತನ್ ಕಕ್ಕಾಡ್ ಎಂಬಾತ 1995ರಲ್ಲಿ ಸ್ಥಳ ಖರೀದಿಸಿದ್ದರು. ಆದರೆ ಆ ಸ್ಥಳದ ನೋಂದಾವಣಿಯನ್ನು ಮಹಾರಾಷ್ಟ್ರ ಸರ್ಕಾರ ಹಾಗೂ ಅರಣ್ಯ ಇಲಾಖೆಯು ರದ್ದುಗೊಳಿಸಿತ್ತು.
ನನ್ನ ಜಾಗದ ಅನುಮತಿ ರದ್ದಾಗಲು ಸಲ್ಮಾನ್ ಖಾನ್ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದಾರೆ. ಸ್ಥಳದಲ್ಲಿರುವ ಗಣೇಶ ದೇವಾಲಯದ ಮುಖ್ಯದ್ವಾರವನ್ನು ಸಲ್ಮಾನ್ ಖಾನ್ ಮುಚ್ವಿದ್ದಾರೆ ಎಂದು ಆರೋಪಿಸಿ ಕೇತನ್ ಕೋರ್ಟ್ ಮೆಟ್ಟಿಲೇರಿದ್ದರು.
ಆದರೆ ಪ್ರಕರಣದ ವಿಚಾರಣೆಯು ನ್ಯಾಯಾಲಯದಲ್ಲಿ ನಡೆಯುತ್ತಿರುವ ನಡುವೆಯೇ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಬಗ್ಗೆ ಅವಹೇಳನಕಾರಿ ಪೋಸ್ಟ್’ಗಳನ್ನು ಹಾಕಲಾಗುತ್ತಿದೆ ಎಂದು ಸಲ್ಮಾನ್ ಖಾನ್, ಕೇತನ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಸಲ್ಮಾನ್ ಖಾನ್ ಪರವಾಗಿ ಹಾಜರಾದ, ವಕೀಲ ಪ್ರದೀಪ್ ಗಾಂಧಿ, ಆಸ್ತಿ ವ್ಯಾಜ್ಯವನ್ನು ಧರ್ಮದ ಆಧಾರದಲ್ಲಿ ತಿರುಚಲಾಗುತ್ತಿದೆ. ನಟನ ವ್ಯಕ್ತಿತ್ವಕ್ಕೆ ಧಕ್ಕೆಯುಂಟುಮಾಡುವ ಪ್ರಯತ್ನ ಮಾಡಲಾಗುತ್ತಿದೆ. ನಟನಿಗೆ ಯಾವುದೇ ರಾಜಕೀಯ ವ್ಯಕ್ತಿಗಳ ಜೊತೆ ಸಂಬಂಧವಿಲ್ಲ ಎಂದು ಪ್ರದೀಪ್ ಹೇಳಿದ್ದಾರೆ.