ಜೆಡಿಎಸ್ ಮುಖಂಡ ಕಾಂತರಾಜು ಕಾಂಗ್ರೆಸ್ ಸೇರ್ಪಡೆ

Prasthutha|

ಬೆಂಗಳೂರು: ವಿಧಾನ ಪರಿಷತ್ತಿನ ಮಾಜಿ ಸದಸ್ಯ, ಜೆಡಿಎಸ್ ಮುಖಂಡ ಕಾಂತರಾಜು ಅವರು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಕೆಪಿಸಿಸಿ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕಾಂತರಾಜು ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಶುಭ ಹಾರೈಸಿದರು. ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಮಾಜಿ ಸಚಿವ ಟಿ.ಬಿ. ಜಯಚಂದ್ರ ಮತ್ತಿತರರು ಹಾಜರಿದ್ದರು.

- Advertisement -

ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ವಿವಿಧ ಪಕ್ಷಗಳಿಂದ ಕಾಂಗ್ರೆಸ್ ಪಕ್ಷ ಸೇರಲು ಸುಮಾರು ಅರ್ಜಿಗಳು ನನ್ನ ಹಾಗೂ ಪಕ್ಷದ ಸಮಿತಿ ಮುಂದೆ ಇವೆ. ಈ ಅರ್ಜಿಗಳ ವಿಚಾರವಾಗಿ ನಾವು ಚರ್ಚೆ ಮಾಡುತ್ತಿದ್ದು, ಸ್ಥಳೀಯವಾಗಿ ಎಲ್ಲೆಲ್ಲಿ ನಾಯಕರುಗಳ ಒಮ್ಮತ ಇದೆ ಅಲ್ಲಿನ ಅರ್ಜಿಗಳ ಬಗ್ಗೆ ನಾವು ಮೊದಲು ತೀರ್ಮಾನ ಮಾಡಿಕೊಂಡು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದೇವೆ ಎಂದರು.

ಪಕ್ಷ ಸೇರಬೇಕಾದರೆ ಆ ವಿಚಾರವಾಗಿ ಜಿಲ್ಲಾ ಮಟ್ಟದ ಮುಖಂಡರು ಹಾಗೂ ಕಾರ್ಯಕರ್ತರ ಜತೆ ಚರ್ಚಿಸಿ ತೀರ್ಮಾನಿಸುತ್ತಿದ್ದೇವೆ. ಯಾರೇ ಕಾಂಗ್ರೆಸ್ ಸೇರಬೇಕಾದರೂ ಬೆಷರತ್ ನಿಂದ ಬರಬೇಕು. ಜತೆಗೆ ಪಕ್ಷದ ನಾಯಕತ್ವ ಹಾಗೂ ಸಿದ್ಧಾಂತ ಒಪ್ಪಿ ಬರಬೇಕು. ಇನ್ನು ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಸದಸ್ಯರುಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಜಿಲ್ಲಾ ಕಾಂಗ್ರೆಸ್ ಗೆ ಅಧಿಕಾರ ಕೊಟ್ಟಿದ್ದೇವೆ. ಸ್ಥಳೀಯ ಶಾಸಕರು ಹಾಗೂ ಮಾಜಿ ಶಾಸಕರು ಕೂಡ ಪಕ್ಷಕ್ಕೆ ಸೇರಲು ಇಚ್ಚಿಸುವವರನ್ನು ಸೇರಿಸಿಕೊಳ್ಳಲು ಅವಕಾಶ ನೀಡಲಾಗಿದೆ ಎಂದರು.

- Advertisement -

ಇಂದು ರಾಜ್ಯಮಟ್ಟದ ಸೇರ್ಪಡೆ ಹಮ್ಮಿಕೊಂಡಿದ್ದು, ಇಂದು ವಿಧಾನಪರಿಷತ್ ಮಾಜಿ ಸದಸ್ಯ ಬೆಮೆಲ್ ಕಾಂತರಾಜು ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. ಕಾಂತರಾಜು ಅವರು ತುಮಕೂರಿನಿಂದ ವಿಧಾನ ಪರಿಷತ್ ಗೆ ಆಯ್ಕೆಯಾಗಿದ್ದರು. ಜಿಲ್ಲಾ ಕಾಂಗ್ರೆಸ್ ಹಾಗೂ ಮುಖಂಡರ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ. ದೊಡ್ಡ ಸಮಾರಂಭ ಮಾಡುವ ಇಚ್ಛೆ ಇತ್ತು. ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಪಕ್ಷ ಸೇರ್ಪಡೆ ಕಾರ್ಯಕ್ರಮ ಮಾಡುತ್ತಿದ್ದೇವೆ. ಮತ್ತೊಂದು ದಿನ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಮಾಡೋಣ ಎಂದರು.

ರಾಜ್ಯದ ಎಲ್ಲ ಮುಖಂಡರ ಪರವಾಗಿ ಕಾಂತರಾಜು ಅವರ ಅರ್ಜಿ ಒಪ್ಪಿದ್ದು, ಬಹಳ ಸಂತೋಷದಿಂದ ಅವರನ್ನು ಪಕ್ಷಕ್ಕೆ ಸ್ವಾಗತಿಸುತ್ತಿದ್ದೇವೆ. ಪಕ್ಷಕ್ಕೆ ಸೇರಿದ ನಂತರ ಹೊಸಬರು, ಹಳಬರೆಂಬುದಿಲ್ಲ. ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ತುಮಕೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಾಂತರಾಜು ಅವರಿಗೆ ವ್ಯಾಪಕ ಜನ ಬೆಂಬಲವಿದ್ದು, ಈ ಹಿಂದೆ ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗೆ ಸಹಕಾರ ನೀಡಿದ್ದು, ಅದನ್ನು ಸ್ಮರಿಸುತ್ತಾ ಭವಿಷ್ಯದಲ್ಲಿ ಅವರು ಪಕ್ಷಕ್ಕೆ ದೊಡ್ಡ ಆಸ್ತಿಯಾಗಲಿದ್ದಾರೆ ಎಂದು ಭಾವಿಸಿ ಪಕ್ಷಕ್ಕೆ ಸ್ವಾಗತಿಸುತ್ತಿದ್ದೇವೆ ಎಂದರು.

ಪಕ್ಷದ ಸದಸ್ಯತ್ವ ಅಭಿಯಾನ ಆರಂಭವಾಗಿದ್ದು, ಇಂದು ಹಾಗೂ ನಾಳೆ ದೆಹಲಿಯಿಂದ ತರಬೇತಿ ಸಭೆ ಇದೆ. ಅಫ್ಲೈನ್ ಹಾಗೂ ಆಫ್ ಲೈನ್ ನಲ್ಲಿ ಸದಸ್ಯತ್ವ ನೋಂದಣಿ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. 12 ವರ್ಷಗಳ ನಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಈ ಅವಕಾಶ ಮಾಡಿಕೊಟ್ಟಿದ್ದು, ಎಲ್ಲರೂ ಈ ಅವಕಾಶ ಉಪಯೋಗಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.

ಪಕ್ಷದ ಸದಸ್ಯತ್ವ ನೋಂದಣಿ ಕಾರ್ಯಕ್ರಮ ಬಹಳ ಮುಖ್ಯವಾಗಿದ್ದು, ಭವಿಷ್ಯದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇಮಕ, ವಿಧಾನಸಭೆ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂಬ ವಿಚಾರವಾಗಿ ಸ್ಥಳೀಯವಾಗಿ ಪಕ್ಷದ ಸದಸ್ಯರ ಅಭಿಪ್ರಾಯ ಪಡೆಯಲು ಈ ನೋಂದಣಿಯ ದತ್ತಾಂಶಗಳನ್ನು ಬಳಸಿಕೊಳ್ಳಲಾಗುವುದು. ಒಂದು ಸ್ಥಾನಕ್ಕೆ ನಾಲ್ಕೈದು ಮಂದಿ ಆಕಾಂಕ್ಷಿಗಳಿದ್ದರೆ ಅಂತಹ ಸಮಯದಲ್ಲಿ ಹೇಕಮಾಂಡ್ ತಮ್ಮ ಆಪ್ ಮೂಲಕ ಸ್ಥಳೀಯ ಸದಸ್ಯರಿಂದ ಯಾರನ್ನು ಆಯ್ಕೆ ಮಾಡಬೇಕು ಎಂಬ ಅಭಿಪ್ರಾಯ ಸಂಗ್ರಹಿಸಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಪ್ರತಿ ಬೂತ್  ನಲ್ಲಿ 200, 300 ಸದಸ್ಯರನ್ನು ನೋಂದಣಿ ಮಾಡಬಹುದಾಗಿದೆ. ಈ ಅಭಿಯಾನದ ಕಾಲಾವಧಿ ವಿಸ್ತರಣೆಯಾಗುವುದಿಲ್ಲ. ಎಲ್ಲ ನಾಯಕರು ತಮ್ಮ ಬೂತ್ ಗಳಲ್ಲಿ ಮನೆ ಮನೆಗಳಿಗೆ ಹೋಗಿ ನೋಂದಣಿ ಮಾಡಿಸಬೇಕಿದೆ ಎಂದು ಶಿವಕುಮಾರ್ ತಿಳಿಸಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳನ್ನು ಒಪ್ಪಿ ಪಕ್ಷ ಸೇರಿದ್ದೇನೆ ಎಂದು ಕಾಂತರಾಜು ಅವರು ಹೇಳಿದ್ದಾರೆ, ಬಹಳ ಸಂತೋಷ. ಸಿದ್ಧಾಂತವಿಲ್ಲದೆ ರಾಜಕೀಯ ಪಕ್ಷ ಹೆಚ್ಚು ಕಾಲ ಉಳಿಯಲ್ಲ. ಜೆಡಿಎಸ್ ಗೆ ಯಾವುದೇ ಸಿದ್ಧಾಂತವಿಲ್ಲ. ಅದೊಂದು ಅವಕಾಶವಾದಿ ಪಕ್ಷ. ಇಂದು ದೇಶದಲ್ಲಿ ಸಿದ್ಧಾಂತ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಆಧಾರದ ಮೇಲೆ ರಾಜಕಾರಣ ಮಾಡುತ್ತಿರುವುದು ಕಾಂಗ್ರೆಸ್ ಮಾತ್ರ. ಬಿಜೆಪಿ ಪಕ್ಷ ಆರ್.ಎಸ್.ಎಸ್ ನ ರಾಜಕೀಯ ಮುಖವಾಡ ಮಾತ್ರ. ಇವರಿಗೂ ಯಾವುದೇ ರಾಜಕೀಯ ಸಿದ್ಧಾಂತವಿಲ್ಲ ಎಂದರು.

ಧರ್ಮ, ದೇವರು ಮುಂತಾದ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ಸಮಾಜ ಒಡೆದು, ಮತಾಂಧರನ್ನು ಸೃಷ್ಟಿಸಿ ತನ್ಮೂಲಕ ತಮ್ಮ ಗುಪ್ತ ಅಜೆಂಡವನ್ನು ಸಾಧಿಸುವುದು ಬಿಜೆಪಿ ಕೆಲಸ. ಸಾಮಾಜಿಕ ಪರಿವರ್ತನೆಯನ್ನು ಅವರು ಬಯಸಲ್ಲ. ಹಿಂದೂ ರಾಷ್ಟ್ರ ನಿರ್ಮಾಣ ಬಿಜೆಪಿಯವರ ಗುಪ್ತ ಅಜೆಂಡಾ. ಭಾರತದಂತ ಬಹು ಸಂಸ್ಕೃತಿ, ಬಹು ಧರ್ಮದ ಜನರಿರುವ ರಾಷ್ಟ್ರವನ್ನು ಒಂದೇ ಧರ್ಮಕ್ಕೆ ಸೀಮಿತಗೊಳಿಸುವುದು ಸಾಧ್ಯವಿಲ್ಲ. ಸಂವಿಧಾನ ಇದಕ್ಕೆ ಅವಕಾಶ ನೀಡುವುದಿಲ್ಲ. ಇದೇ ಕಾರಣಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸಹಿಷ್ಣುತೆ ಎಂಬ ಪದವನ್ನು ಬಳಸಿದ್ದಾರೆ. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವಗಳು ಸಂವಿಧಾನದ ಆಧಾರಗಳು. ಚುನಾಯಿತ ಸರ್ಕಾರ ಈ ಸಂವಿಧಾನದ ಆಶಯಗಳಂತೆ ನಡೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂಬ ಕಾರಣಕ್ಕೆ ಕಾಂಗ್ರೆಸ್ ಗೆಲ್ಲಬೇಕಾದುದ್ದಲ್ಲ. ದೇಶ, ಸಂವಿಧಾನ ಉಳಿಯಬೇಕು ಎಂಬ ಕಾರಣಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಕೇಂದ್ರದಲ್ಲಿ ಬಿಜೆಪಿ ಆಡಳಿತಕ್ಕೆ ಬಂದು ಎಂಟು ವರ್ಷಗಳಾಗಿದೆ. ರೈತರು, ಬಡವರು, ವಿದ್ಯಾರ್ಥಿಗಳು, ಮಹಿಳೆಯರು, ಕೂಲಿ ಕಾರ್ಮಿಕರು ಹೀಗೆ ಯಾವುದಾದರೂ ಒಂದು ವರ್ಗದ ಜನರಿಗೆ ತೃಪ್ತಿ ನೀಡುವಂತ ಆಡಳಿತ ನೀಡಿದೆಯೇ? ಹೋಗಲಿ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗಿದೆಯೇ? ಯಾವುದೂ ಇಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಮೂರು ವರ್ಷ ಆಗ್ತಿದೆ. ಯಾವುದಾದರೂ ಅಭಿವೃದ್ಧಿ ಕೆಲಸ ಮಾಡಿದೆಯ? ನೀರಾವರಿ ಯೋಜನೆ ಅನುಷ್ಠಾನ ಮಾಡಿದೆಯಾ? ಇಲ್ಲ. ಹೀಗಾಗಿಯೇ ನಾವು ಮೇಕೆದಾಟು ಯೋಜನೆ ಜಾರಿ ಮಾಡಿ ಎಂದು ಪಾದಯಾತ್ರೆ ಆರಂಭ ಮಾಡಿದ್ದು, ಇದು ನಮ್ಮ ಸರ್ಕಾರದ ಯೋಜನೆ. ಸುಪ್ರೀಂ ಕೋರ್ಟ್ ನಲ್ಲಿ ಕಾವೇರಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಅಂತಿಮ ನಿರ್ಣಯ ಬಂದಿದೆ. ಯೋಜನೆಗೆ ವಿರೋಧ ಮಾಡಲು ತಮಿಳುನಾಡಿಗೆ ಯಾವುದೇ ಕಾನೂನಾತ್ಮಕ ಹಕ್ಕು ಇಲ್ಲ. ಅರಣ್ಯ ಇಲಾಖೆ ಅನುಮತಿ ಪಡೆಯಲು ಇವರಿಗೆ ಬಂದಿರೋದೇನು? ಇದನ್ನು ಕೇಳಿದ್ದಕ್ಕೆ ನಮ್ಮ ಮೇಲೆ ಸುಳ್ಳು ಮೊಕದ್ದಮೆ ಹೂಡಿದ್ದಾರೆ. ನನ್ನ ಮೇಲೆ ಮೂರು, ಡಿ.ಕೆ ಶಿವಕುಮಾರ್ ಮೇಲೆ ನಾಲ್ಕು ಕೇಸ್ ಹಾಕಿದ್ದಾರೆ. ಬಿಜೆಪಿಯವರು ಕೊರೊನಾ ನಿಬಂಧನೆಗಳನ್ನು ಮೀರಿದ್ದರೂ ಅವರ ವಿರುದ್ಧ ಯಾವ ಕೇಸ್ ಹಾಕಿಲ್ಲ. ಮಕ್ಕಳಿಗೆ ಹಾಯ್ ಎಂದಿದ್ದಕ್ಕೂ ಕೇಸ್ ಹಾಕಿದ್ದಾರೆ. ಇದು ಯಾವ ಅಪರಾಧ ಎಂದು ನನಗಂತೂ ಗೊತ್ತಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಆರಂಭವಾಗಿದೆ. ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲಾ ನಾಯಕರು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಮನವಿ ಮಾಡುತ್ತೇನೆ ಎಂದರು.



Join Whatsapp