ಧಾರವಾಡ: ಹಿರಿಯ ಕವಿ ಡಾ.ಚೆನ್ನವೀರ ಕಣವಿ ಅವರ ಚಿಕಿತ್ಸಾ ವೆಚ್ಚ ಭರಿಸಲು ಸರ್ಕಾರ ಮುಂದಾಗಿದ್ದು, ಆಸ್ಪತ್ರೆಗೆ ದಾಖಲಾದ ಮಾಹಿತಿ ಬಂದ ಕೂಡಲೇ ಜಿಲ್ಲಾಡಳಿತ ಉತ್ತಮ ಚಿಕಿತ್ಸೆ ನೀಡಲು ಕ್ರಮ ಕೈಗೊಂಡಿದೆ. ಚಿಕಿತ್ಸೆಗೆ ಐಸಿಯು ಮತ್ತು ಬೆಡ್ ಮೀಸಲಿರಿಸಲಾಗಿದ್ದು, ಎಲ್ಲಾ ವೆಚ್ಚವನ್ನೂ ಸರ್ಕಾರವೇ ಭರಿಸಲಿದೆ.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಅವರು ಕಣವಿ ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದರು.
ಡಾ.ಕಣವಿ ಗುಣಮುಖರಾಗಿ ಮನೆಗೆ ಬರುವವರೆಗೆ ಅವರ ಎಲ್ಲ ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು ಸರಕಾರದಿಂದ ಭರಿಸಲು ಕ್ರಮವಹಿಸಲಾಗಿದೆ. ಈ ಬಗ್ಗೆ ಎಸ್.ಡಿ.ಎಮ್. ಆಸ್ಪತ್ರೆಯ ಆಡಳಿತ ಮಂಡಳಿಗೆ ಹಾಗೂ ಡಾ.ಕಣವಿ ಅವರ ಕುಟುಂಬ ಸದಸ್ಯರಿಗೆ ಜಿಲ್ಲಾಡಳಿತ ಮಾಹಿತಿ ನೀಡಿದೆ.
ಉತ್ತಮ ಚಿಕಿತ್ಸೆ ನೀಡಲು ಸರಕಾರದಿಂದ ಅಗತ್ಯ ವ್ಯವಸ್ಥೆ ಮಾಡಲಾಗಿದ್ದು ಕಣವಿ ಅವರ ಆರೋಗ್ಯದ ಕುರಿತು ಕಾಳಜಿ ವಹಿಸಿದೆ. ದಿನನಿತ್ಯ ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ಅಧೀಕ್ಷಕರೊಂದಿಗೆ ಮತ್ತು ಡಾ.ಕಣವಿ ಅವರ ಕುಟುಂಬದವರೊಂದಿಗೆ ಸಂಪರ್ಕದಲ್ಲಿದ್ದು ಜಾಗೃತಿ ವಹಿಸಲಾಗಿದೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.