ಭುವನೇಶ್ವರ: ಜಿಂದಾಲ್ ಕಂಪೆನಿ ವಿರುದ್ಧ ಪ್ರತಿಭಟಿಸಿದ ಗ್ರಾಮಸ್ಥರ ಮೇಲೆ ಪೊಲೀಸರು ಮಾರಣಾಂತಿಕ ಲಾಠಿ ಚಾರ್ಜ್ ನಡೆಸಿದ ಘಟನೆ ಒಡಿಶಾದ ಜಗತ್ಸಿಂಗ್ಪುರ ಜಿಲ್ಲೆಯ ಧಿಂಕಿಯಾ ಗ್ರಾಮದಲ್ಲಿ ನಡೆದಿದೆ.
ತೋಟಗಳನ್ನು ಕೆಡವದಂತೆ ಪ್ರತಿಭಟನೆ ನಡೆಸುತ್ತಿದ್ದ ಗ್ರಾಮಸ್ಥರ ಮೇಲೆ ಪೊಲೀಸರು ಮಾರಣಾಂತಿಕವಾಗಿ ಲಾಠಿ ಚಾರ್ಜ್ ಮಾಡಿದ್ದು, ಮಹಿಳೆಯರು ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಗ್ರಾಮಸ್ಥರು ತೀವ್ರವಾಗಿ ಗಾಯಗೊಂಡಿದ್ದಾರೆ.
ತಮ್ಮ ಭೂಮಿ ಮತ್ತು ವೀಳ್ಯದೆಲೆ ತೋಟಗಳನ್ನು ಉಳಿಸಿಕೊಳ್ಳಲು ಜಿಂದಾಲ್ ಸ್ಟೀಲ್ ವರ್ಕ್ಸ್ (JSW) ಲಿಮಿಟೆಡ್ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು.
ಧಿಂಕಿಯಾ, ನುಗಾಂವ್ ಮತ್ತು ಗಡಕುಜಾಂಗ್ನ ಕಡಲತೀರದ ಗ್ರಾಮ ಪಂಚಾಯತ್ಗಳಲ್ಲಿ ಉಕ್ಕಿನ ಸ್ಥಾವರವನ್ನು ಸ್ಥಾಪಿಸಲು JSWಗೆ ಭೂಮಿ ಮತ್ತು ವೀಳ್ಯದೆಲೆ ತೋಟಗಳನ್ನು ನೀಡಲು ಒಡಿಶಾ ಸರ್ಕಾರ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.