ಬೆಂಗಳೂರು: ರಸ್ತೆ ಅಪಘಾತದಲ್ಲಿ ಮೃತಪಟ್ಟ ಸೂಪರ್ ಸ್ಟಾರ್ ರಿಯಾಲಿಟಿ ಶೋನ ಸ್ಪರ್ಧಿ ಸಮನ್ವಿ ಸಾವಿಗೆ ಲಾರಿ ಚಾಲಕನ ಅಜಾಗರೂಕತೆಯೇ ಕಾರಣವಾಗಿರುವುದು ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.
ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿ ಚಾಲಕ ಮಂಚೇಗೌಡ ಎಂಬಾತನನ್ನು ಬಂಧಿಸಿ ಮುಂದಿನ ತನಿಖೆಯನ್ನು ಕೈಗೊಳ್ಳಲಾಗಿದೆ.
ಈ ನಡುವೆ ಮೃತ ಸಮನ್ವಿ ಮೃತದೇಹವನ್ನು ಕಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
ನಟಿ ಅಮೃತಾ ನಾಯ್ಡು ಅವರು ಏಳು ತಿಂಗಳ ಗರ್ಭಿಣಿಯಾಗಿದ್ದಾಗ ಆ ಮಗು ಸಾವನ್ನಪ್ಪಿದ್ದು, ಬಳಿಕ ಸಮನ್ವಿ ಹುಟ್ಟಿದ್ದಳು. ಆದರೆ ಇದೀಗ ಈಕೆಯನ್ನೂ ಅಮೃತಾ ಕಳೆದುಕೊಂಡಿದ್ದಾರೆ.
ಸಮನ್ವಿ ಬಂದ ಬಳಿಕ ಬದುಕಿನಲ್ಲಿ ನಗು ಮೂಡಿತ್ತು ಎಂದು ಹಲವು ಬಾರಿ ಅಮೃತಾ ಹೇಳಿದ್ದರು. ಆದರೆ ಇದೀಗ ಮತ್ತೆ ಅಮೃತಾ ಅವರ ಬಾಳಲ್ಲಿ ಮತ್ತೆ ನಗು ಮಾಸಿದೆ.
ಧಾರಾವಾಹಿಗಳಲ್ಲೂ ಅಭಿನಯಿಸುತ್ತಿದ್ದ ಅಮೃತಾ ನಾಯ್ಡ 4 ತಿಂಗಳು ಗರ್ಭಿಣಿಯಾಗಿರುವ ಹಿನ್ನೆಲೆಯಲ್ಲಿ ಸೀರಿಯಲ್ ನಿಂದ ದೂರ ಉಳಿದಿದ್ದರು. ಈ ನಡುವೆ ನಮ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ದಲ್ಲಿ ಅಮ್ಮ ಮಗಳು ಸ್ಪರ್ಧಿಗಳಾಗಿದ್ದರು. ಅಮೃತಾ ಗರ್ಭಿಣಿಯಾಗಿರುವ ಕಾರಣ ಡಾನ್ಸ್ ಹಾಗೂ ಹಲವು ಟಾಸ್ಕ್ ಕಷ್ಟ ಎನ್ನುವ ಕಾರಣದಿಂದ ಕಳೆದ ವಾರ ಎಲಿಮನೇಟ್ ಆಗಿ ಹೊರಬಂದಿದ್ದರು.
ಸಮನ್ವಿ ನಿಧನಕ್ಕೆ ಕಿರುತೆರೆ ಲೋಕದ ಅನೇಕರು ಕಂಬನಿ ಮಿಡಿಯುತ್ತಿದ್ದಾರೆ. ಸೃಜನ್ ಲೋಕೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿ ‘ದೇವರು ನಿಜವಾಗಿಯೂ ದೇವರಾ? ಅಥವಾ ದೇವರು ಇದ್ದಾನಾ? ಇಲ್ಲ, ದೇವರನ್ನ ನಂಬಲೇಬೇಕಾ? ಈ ಪ್ರಶ್ನೆಗಳು ಆಗಾಗ ಮೂಡಿ ಬರುತ್ತಿವೆ. ಇವತ್ತು ಈ ಘಟನೆಯ ನಂತರ ನಿಜವಾಗಲೂ ದೇವರು ಇದ್ದಾನೋ ಇಲ್ಲವೋ ಅನ್ನೋ ಪ್ರಶ್ನೆ ಮನಸ್ಸಿಗೆ ತುಂಬಾ ಗಾಢವಾಗಿ ಕಾಡುತ್ತಿದೆ. ಪುಟ್ಟ ಕಂದ ಸಮನ್ವಿ ಮಿಸ್ ಯೂ. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಪೋಸ್ಟ್ ಮಾಡಿದ್ದಾರೆ.
ರಿಯಾಲಿಟಿ ಶೋ ಸ್ಪರ್ಧಿ ಸಮನ್ವಿ ಸಾವಿಗೆ ಕಲರ್ಸ್ ಕನ್ನಡ ಮುಖ್ಯಸ್ಥ ಪರಮೇಶ್ವರ್ ಗುಂಡ್ಕಲ್ ಫೇಸ್ ಬುಕ್ ನಲ್ಲಿ ಕಂಬನಿ ಮಿಡಿದಿದ್ದಾರೆ. ಸುದ್ದಿ ಕೇಳಿದಾಗಿನಿಂದ ಮನಸ್ಸಿಗೆ ತೊಂದರೆಯಾಗುತ್ತಿದೆ. ಮಗುವನ್ನು ಕಳೆದುಕೊಂಡಿರುವ ತಾಯಿಯ ಬಗ್ಗೆ ಯೋಚಿಸಲೂ ಆಗುತ್ತಿಲ್ಲ. ಮಗುವನ್ನು ಕಳೆದುಕೊಳ್ಳುವುದಕ್ಕಿಂತ ದೊಡ್ಡ ನೋವು ಇನ್ನೊಂದಿಲ್ಲ ಎಂದು ಬರೆದಿದ್ದಾರೆ.
ದುರ್ಘಟನೆ ಹೇಗಾಯಿತು?
ಕನಕಪುರ ರಸ್ತೆಯ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿರುವ ಅಮೃತ ನಾಯ್ಡು ನಿನ್ನೆ ಸಂಜೆ ಹೋಂಡಾ ಆಕ್ಟಿವಾದಲ್ಲಿ ಮಗಳೊಂದಿಗೆ ಮನೆಯಿಂದ ಹೊರಗಡೆ ಹೊರಟಿದ್ದರು. ವಾಜರಹಳ್ಳಿ ಮೆಟ್ರೋ ಸ್ಟೇಶನ್ ಬಳಿ ಆಕ್ಟಿವಾ ಪಾರ್ಕ್ ಮಾಡಿ ಇಬ್ಬರೂ ಗಾಯತ್ರಿ ನಗರಕ್ಕೆ ಹೋಗಬೇಕಿತ್ತು.
ಮೆಟ್ರೋ ನಿಲ್ದಾಣಕ್ಕೆ 100 ಮೀ. ದೂರ ಇರುವಂತೆ ತಾಯಿ ಮಗಳು ಟಾಟಾ ಸುಮೋ ಹಾಗೂ ಲಾರಿ ಮಧ್ಯೆ ಸಿಲುಕಿದ್ದರು. ಟಿಪ್ಪರ್ ಲಾರಿ ಚಾಲಕ ಎಡಕ್ಕೆ ಗಾಡಿಯನ್ನು ತಿರುಗಿಸಿದ್ದಾನೆ. ಪರಿಣಾಮ ಎಡಭಾಗದ ಬಂಪರ್ ಡಿಕ್ಕಿ ಹೊಡೆದಿದ್ದರಿಂದ ಅಮೃತ ನಾಯ್ಡು ಮತ್ತು ಮನ್ವಿ ರಸ್ತೆಗೆ ಬಿದ್ದಿದ್ದಾರೆ. ಮಾನ್ವಿಯ ಸೊಂಟಕ್ಕೆ ಲಾರಿ ಬಂಪರ್ ಬಲವಾಗಿ ಗುದ್ದಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಾರ್ಗ ಮಧ್ಯೆ ಸಮನ್ವಿ ಮೃತಪಟ್ಟಿದ್ದಳು. ಕುಮಾರ ಸ್ವಾಮಿ ಲೇಔಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.