ಬೆಂಗಳೂರು: ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನ ಸಂಸ್ಥೆ ಇನ್ಫೋಸಿಸ್ ಲೋಗೋ ಬಳಕೆ ಮಾಡಿಕೊಂಡ ಸೈಬರ್ ಖದೀಮರು ಲಕ್ಷ ಲಕ್ಷ ರೂಗಳ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಇನ್ಫೋಸಿಸ್ ಕಂಪನಿಯಿಂದ ನಿಮಗೆ ಕೆಲಸದ ಆಫರ್ ಬಂದಿದೆ ಎಂದು ಕರೆ ಮಾಡಿ ಸೈಬರ್ ಖದೀಮರು ವಂಚನೆ ಮಾಡಿದ್ದು ಈ ಸಂಬಂಧ ಪ್ರಕರಣ ದಾಖಲಿಸಿರುವ ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ಇನ್ಫೋಸಿಸ್ ಹೆಸರು ಹೇಳಿದ ತಕ್ಷಣ ಉದ್ಯೋಗಾಕಾಂಕ್ಷಿಗೆ ಖುಷಿಯಾಗಿದ್ದು, ಸೈಬರ್ ಖದೀಮರು ಕೇಳಿದ ಎಲ್ಲದಕ್ಕೂ ಉತ್ತರ ನೀಡಿದ್ದಾನೆ ಮತ್ತೆ ಮತ್ತೆ ಕರೆ ಮಾಡಿದ ಚಾಲಾಕಿಗಳು ಆ ಶುಲ್ಕ ಈ ಶುಲ್ಕ ಎಂದು ಹೇಳಿಕೊಂಡು 4 ಲಕ್ಷಕ್ಕೂ ಹೆಚ್ಚು ಹಣವನ್ನು ಉದ್ಯೋಗಾಕಾಂಕ್ಷಿಗಳಿಂದ ಎಗರಿಸಿದ್ದಾರೆ. ಖಾತೆಗೆ ಹಣ ಬಂದ ತಕ್ಷಣ ಖದೀಮರು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಬಳಿಕ ತಾವು ಮೋಸ ಹೋಗಿರುವುದು ಅರಿವಿಗೆ ಬಂದಿದೆ.
ನಾಲ್ಕು ಲಕ್ಷ ರೂಪಾಯಿ ಕಳೆದುಕೊಂಡು ಕಂಗಲಾಗಿರುವ ಉದ್ಯೋಗಾಕಾಂಕ್ಷಿ ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ವಂಚಕರ ಬಂಧನಕ್ಕೆ ಬಲೆ ಬೀಸಿದ್ದಾರೆ.
ಇನ್ಫೋಸಿಸ್ ಲೋಗೋ ಬಳಕೆ ಮಾಡಿ 4 ಲಕ್ಷ ವಂಚನೆ
Prasthutha|