ಬೆಂಗಳೂರು: ಮೇಕೆದಾಟು ಯೋಜನೆಯ ಶೀಘ್ರ ಅನುಷ್ಠಾನಕ್ಕೆ ಒತ್ತಾಯಿಸಿ ರಾಜ್ಯ ಕಾಂಗ್ರೆಸ್ ಭಾನುವಾರ ಪಾದಯಾತ್ರೆಯನ್ನು ಆರಂಭಿಸಿದೆ. ಸರ್ಕಾರದ ತೀವ್ರ ಒತ್ತಡ ಮತ್ತು ಸವಾಲುಗಳ ಮಧ್ಯೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಉಪಸ್ಥಿತರಿದ್ದರು.
ಆದಿಚುಂಚನಗಿರಿ ಕ್ಷೇತ್ರದ ರಾಮನಗರ ಶಾಖಾಮಠಡ ಅನ್ನದಾನೇಶ್ವರ ಸ್ವಾಮೀಜಿ, ಕನಕಪುರ ಮರಳಗವಿ ಮಠದ ಶಿವರುದ್ರ ಸ್ವಾಮೀಜಿ, ದೇಗುಲಮಠಡ ನಿರ್ವಾಣ ಸ್ವಾಮೀಜಿ, ಹಾರುಬಲೆ ಚರ್ಚ್ ನ ಪಾದ್ರಿ ಸೇರಿ ಅನೇಕ ಧಾರ್ಮಿಕ ನಾಯಕರ ಸಾನಿಧ್ಯದಲ್ಲಿ ನಗಾರಿ ಬಾರಿಸಿ, ಗಿಡಗಳಿಗೆ ನೀರು ಎರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಚಿತ್ರರಂಗದ ಪ್ರಮುಖರಾದ ಉಮಾಶ್ರೀ, ದುನಿಯಾ ವಿಜಯ್, ಸಾಧುಕೋಕಿಲ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಮ್ ಅಹ್ಮದ್, ರಾಮಲಿಂಗಾರೆಡ್ಡಿ, ದೃವನಾರಾಯಣ್, ಶಾಸಕರಾದ ಎಂ.ಬಿ.ಪಾಟೀಲ್, ಡಾ.ಜಿ.ಪರಮೇಶ್ವರ್, ಆರ್.ವಿ. ದೇಶಪಾಂಡೆ, ಕೆ.ಆರ್. ರಮೇಶ್ ಕುಮಾರ್, ಎಚ್. ಕೆ. ಪಾಟೀಲ್, ಕೆ.ಜೆ. ಜಾರ್ಜ್, ಅಲ್ಲಂ ವೀರಭದ್ರಪ್ಪ, ಬಿ.ಕೆ. ಹರಿಪ್ರಸಾದ್, ಲಕ್ಷ್ಮೀ ಹೆಬ್ಬಾಳ್ಕರ್, ರೂಪಾ ಶಶೀಧರ್, ಅಕೈ ಪದ್ಮಸಾಲಿ, ಯು.ಬಿ.ವೆಂಕಟೇಶ್, ಎಸ್.ರವಿ, ನಾಗೇಂದ್ರ, ಇ.ತುಕಾರಾಂ, ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ರಾಜ್ಯಸಭೆ ಸದಸ್ಯರಾದ ಜಿ.ಸಿ.ಚಂದ್ರಶೇಖರ್, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್, ಟಿ.ಬಿ.ಜಯಚಂದ್ರ, ಚಲುವರಾಯಸ್ವಾಮಿ, ಎಚ್.ಸಿ.ಮಹದೇವಪ್ಪ, ಶಿವಶಂಕರರೆಡ್ಡಿ, ಕೆ.ಎಚ್.ಮುನಿಯಪ್ಪ, ಪಿ.ಟಿ.ಪರಮೇಶ್ವರ್ ನಾಯಕ್, ಪಿ.ಜಿ.ಆರ್.ಸಿಂಧ್ಯಾ, ಬಿ.ಎಲ್.ಶಂಕರ್, ಎಚ್..ಎಂ.ರೇವಣ್ಣ, ಮೊಟಮ್ಮ, ಸಚ್ಚಿನ್ ಮೀಗಾ, ಪುಷ್ಪಾ ಅಮರ್ ನಾಥ್ ಸೇರಿ ಅನೇಕರು ಭಾಗವಹಿಸಿದ್ದರು.
ಸಂಸದ ಡಿ.ಕೆ. ಸುರೇಶ್ ಅವರು ಸ್ತಾಸ್ತಾವಿಕವಾಗಿ ಮಾತನಾಡುತ್ತಾ, ಮೂವತ್ತು ವರ್ಷಗಳಿಂದ ಮೇಕೆದಾಟು ಯೋಜನೆಗೆ ಬೇಡಿಕೆ ಕೇಳಿ ಬಂದಿದೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಈ ಯೋಜನೆಯ ಕುರಿತು ರೂಪುರೇಷೆ ರಚನೆಯಾಗಿತ್ತು. ಕೇಂದ್ರದಿಂದ ವಾಪಾಸ್ ಬಂದಿದ್ದ ಯೋಜನೆಯ ಪ್ರಸ್ತಾಪವನ್ನು ಡಿ.ಕೆ. ಶಿವಕುಮಾರ್ ಸಚಿವರಾಗಿದ್ದಾಗ ಮತ್ತೆ ಕೇಂದ್ರಕ್ಕೆ ಕಳುಹಿಸಿ ಅನುಮತಿ ಪಡೆಯಲಾಯಿತು. ಯೋಜನೆಯಿಂದ ಹಾನಿಗೊಳಗಾಗುವ ಅರಣ್ಯ ಪ್ರದೇಶಕ್ಕೆ ಪರ್ಯಾಯವಾಗಿ ಮಂಡ್ಯ, ರಾಮನಗರ, ಚಾಮರಾಜನಗರ ಜಿಲ್ಲೆಗಳಲ್ಲಿ ಹತ್ತು ಸಾವಿರ ಎಕರೆಯನ್ನು ಗುರುತಿಸಲಾಗಿದೆ ಎಂದು ಕೇಂದ್ರ ಅರಣ್ಯ ಇಲಾಖೆಗೆ ತಿಳಿಸಲಾಗಿದೆ. ಆದರೂ ಈವರೆಗೂ ಯೋಜನೆ ಆರಂಭವಾಗಿಲ್ಲ. ಯೋಜನೆ ಶುರುವಾಗಬೇಕು ಎಂದು ಆಗ್ರಹಿಸಲು ಸಂಗಮದಿಂದ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದವರೆಗೂ 156 ಕಿಲೋ ಮೀಟರ್ ಪಾದಯಾತ್ರೆ ಆರಂಭವಾಗಲಿದೆ ಎಂದು ಹೇಳಿದರು.
ಮೇಕೆದಾಟಿ ಯೋಜನೆಯ ಶೀಘ್ರ ಅನುಷ್ಠಾನಕ್ಕೆ ಒತ್ತಾಯಿಸಿ ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆಯ ವೀಕ್ಷಣೆಯನ್ನು ಖುದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ನಿರ್ವಹಿಸಿದರು.
ಮೇಕೆದಾಟು ಸಮೀಪ ಸಂಗಮದಲ್ಲಿ ವಿಭಿನ್ನವಾದ ವೇದಿಕೆಯನ್ನು ನಿರ್ಮಿಸಲಾಗಿತ್ತು. ನೀರಿನ ನಡುವೆ ಹಾಕಲಾಗಿದ್ದ ವೇದಿಕೆಯಲ್ಲಿ ಪಾದಯಾತ್ರೆಯನ್ನು ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಆಯ್ದ ಗಣ್ಯರು ಮತ್ತು ಶಾಸಕರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಮುಂಜಾನೆ 5.30 ಕ್ಕೆ ಡಿ.ಕೆ. ಶಿವಕುಮಾರ್ ಮತ್ತು ಸಂಸದ ಡಿ. ಕೆ. ಸುರೇಶ್ ಸ್ಥಳಕ್ಕಾಗಮಿಸಿ ಕೊನೆ ಕ್ಷಣದ ಸಿದ್ಧತೆಗಳನ್ನು ಪರಿಶೀಲಿಸಿದರು.
ಸಾಂಸ್ಕೃತಿಕ ತಂಡಗಳಾದ ವೀರಗಾಸೆ, ನಂದಿಕೋಲು, ಪಟ ಕುಣಿತ, ಡೋಲು-ತಮಟೆ ವಾದ್ಯಗಳು ಹೋರಾಟಕ್ಕೆ ರಂಗು ತಂದಿದ್ದವು. ಮಾಜಿ ಸಚಿವೆ ಉಮಾಶ್ರೀ, ಮುಖ್ಯಮಂತ್ರಿ ಚಂದ್ರು, ಹಿರಿಯ ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲ ಸಾಂಸ್ಕೃತಿಕ ಚಟುವಟಿಕೆಗಳನ್ನು ನಿರ್ದೇಶಿಸಿದ್ದರು.
ಮಹಿಳಾ ಕಾಂಗ್ರೆಸ್ ಘಟಕದ ಕಾರ್ಯಕರ್ತರು ಕಾವೇರಿ ನೀರನ್ನು ತಂದು ಸಂಗಮದಲ್ಲಿ ಅರ್ಕಾವತಿ ಮತ್ತು ವೃಷಭಾವತಿ ನಾಲೆಗೆ ಸುರಿಯುವ ಮೂಲಕ ನೀರಿಗಾಗಿ ನಡಿಗೆಗೆ ನಾಂದಿಯಾಡಿದರು.
ಮೊದಲ ದಿನದ ಪಾದಯಾತ್ರೆ ಸಂಗಮದಿಂದ ಆರಂಭವಾಗಿ ಡಿ.ಕೆ.ಶಿವಕುಮಾರ್ ಅವರ ಹುಟ್ಟುರಾದ ದೊಡ್ಡ ಆಲನಹಳ್ಳಿವರೆಗೂ ನಡೆಯಿತು. ಮಧ್ಯದಲ್ಲಿ ಹೆಗ್ಗನೂರಿನಲ್ಲಿ ಭೋಜನ ವಿರಾಮಕ್ಕೆ ಬ್ರೇಕ್ ನೀಡಲಾಗಿತ್ತು. ಬೆಳಗ್ಗೆ ಆರು, ಮಧ್ಯಾಹ್ನದಿಂದ ಸಂಜೆವರೆಗೂ ಎಂಟು ಸೇರಿ ಮೊದಲ ದಿನ ಒಟ್ಟು 14 ಕಿಲೋ ಮೀಟರ್ ಪಾದಯಾತ್ರೆ ನಡೆಯಲಿದೆ.
ಪಾದಯಾತ್ರೆಯ ಉದ್ಧಕ್ಕೂ ಅತ್ಯಂತ ವ್ಯವಸ್ಥಿತವಾಗಿ ಯೋಜನೆ ರೂಪಿಸಲಾಗಿತ್ತು. ದಾರಿಯುದ್ಧಕ್ಕೂ ಸಂಚಾರಿ ಶೌಚಾಲಯಗಳನ್ನು ಸ್ಥಾಪಿಸಲಾಗಿತ್ತು. ಪಾದಯಾತ್ರೆ ಹಾದಿಯಲ್ಲಿ ನಮ್ಮ ನೀರು ನಮ್ಮ ಹಕ್ಕು ಎಂಬ ಘೋಷವಾಕ್ಯಗಳನ್ನು ಬರೆದಿರುವುದು ವಿಶೇಷ.
ಈ ಸಂದರ್ಭದಲ್ಲಿ ಕಾಂಗ್ರೆಸ್ ಬಾವುಟ ಬಳಸದೆ ರಾಷ್ಟ್ರಧ್ವಜ, ಕನ್ಮಡ ಧ್ವಜ, ಜೆಡಿಎಸ್ ಧ್ವಜ ಹೋಲುವ ಹಸಿರು ಧ್ವಜ, ನೀಲಿ ಧ್ವಜಗಳನ್ನು ಆರೋಹಣ ಮಾಡಲಾಗಿತ್ತು. ಸುಮಾರು ನೂರಕ್ಕೂ ಹೆಚ್ಚು ವೈದ್ಯರು, ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ವಾಕಿ ಟಾಕಿಯೊಂದಿಗೆ ಸಜ್ಜಾಗಿದ್ದರು. ಹಿರಿಯ ನಾಯಕರಿಗಾಗಿ ಹದಿಮೂರಕ್ಕೂ ಹೆಚ್ಚು ಹವಾನಿಯಂತ್ರಿತ ಕ್ಯಾರವಾನ್ ಗಳನ್ನು ವ್ಯವಸ್ಥೆ ಮಾಡಲಾಗಿತ್ತು.
ಧಣಿದವರಿಗೆ ಅಲ್ಲಲ್ಲಿ ಹಣ್ಣು, ಎಳೆನೀರು, ಹಣ್ಷಿನ ರಸ ಹಂಚಿಕೆಗೆ ವ್ಯವಸ್ಥೆ ಮಾಡಲಾಗಿತ್ತು. ಅತ್ಯಂತ ವ್ಯವಸ್ಥಿತವಾಗಿ ಪಾದಯಾತ್ರೆಯನ್ನು ಆಯೋಜನೆಗೊಳಿಸಲಾಗಿತ್ತು. ಸಾಂಪ್ರದಾಯಿಕ ಹೋರಾಟದ ಶೈಲಿ ಹೊರತಾಗಿ ಭಿನ್ನ ಶೈಲಿಯನ್ನು ಪಾಲಿಸಲಾಗಿತ್ತು. ಸಾಂಸ್ಕೃತಿಕ ತಂಡ ಸಿದ್ದಪಡಿಸಿದ ಮೇಕೆದಾಟು ಕಾವೇರಿ ಗೀತೆ ಹೋರಾಟದ ಹುರುಪನ್ನು ಹೆಚ್ಚಿಸಿತ್ತು. ಉದ್ಘಾಟನೆಯ ವೇಳೆ ಸಾಧುಕೋಕಿಲ ತಂಡ ಪ್ರಸ್ತುತ ಪಡಿಸಿದ ಹಾಡಿಗೆ ಕಾರ್ಯಕರ್ತರು ಕುಣಿದು ಕುಪ್ಪಳಿಸಿದರು.
ಕಾಂಗ್ರೆಸ್ ನಲ್ಲಿ ಹಿಂದೆಂದೂ ಇಲ್ಲದಂತಹ ಒಗ್ಗಟ್ಟು ಕಂಡು ಬಂತು. ಕಾಂಗ್ರೆಸ್ ನಾಯಕರ ಪ್ಲಕ್ಸ್ ಗಳು ಹೆಜ್ಜೆ ಹೆಜ್ಜೆಗೂ ಕಾಣಸಿಗುತ್ತಿದ್ದವು. ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕ ಭಾಗದವರನ್ನು ಒಳಗೊಂಡಂತೆ ರಾಜ್ಯ ಕಾಂಗ್ರೆಸ್ ನ
ಮೊದಲ ಮತ್ತು ಎರಡನೆ ಸಾಲಿನ ಎಲ್ಲ ನಾಯಕರ ಭಾವಚಿತ್ರಗಳ ಫ್ಲಕ್ಸ್ ಗಳು ದಾರಿಯುದ್ಧಕ್ಕೂ ರಾರಾಜಿಸುತ್ತಿದ್ದವು.
ಸಂಗಮದಲ್ಲಿ ಎರಡು ಅಂಡೆಗಳಲ್ಲಿ ಸಂಗ್ರಹಿಸಿದ ಕಾವೇರಿ ನೀರಿನ ಪೈಕಿ ಒಂದನ್ನು ಬೆಂಗಳೂರಿಗೆ, ಮತ್ತೊಂದನ್ನು ರೈತರಿಗಾಗಿ ಪಾದಯಾತ್ರೆ ಜೊತೆಯಲ್ಲಿ ತರಲಾಯಿತು.
ಕರಗಿದ ಕಾರ್ಮೋಡ:
ಪಾದಯಾತ್ರೆಗೆ ಅನುಮತಿ ಇಲ್ಲ, ವೀಕೆಂಡ್ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಪೊಲೀಸರು ಮುಖಂಡರು, ಕಾರ್ಯಕರ್ತರನ್ನು ಬಂಧಿಸಲಿದ್ದಾರೆ ಎಂಬ ವದ್ಧಂತಿಗಳು ವ್ಯಾಪಕವಾಗಿದ್ದವು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕೂಡ ಸಾಕಷ್ಟು ತಂತ್ರಗಾರಿಕೆ ರೂಪಿಸಿತ್ತು. ನಿನ್ನೆ ನಡೆದ ಹಿರಿಯ ನಾಯಕರ ಸಭೆಯ ವೇಳೆಯಲ್ಲಿ ಎರಡುವರೆ ಸಾವಿರ ಮಂದಿ ಜಮಾವಣೆಗೊಂಡಿದ್ದರು. ಹಳ್ಳಿಗಳಲ್ಲೂ ಬಲಾಬಲ ಪ್ರದರ್ಶನಕ್ಕೆ ತಯಾರಿ ನಡೆದಿತ್ತು. ಆದರೆ ಕೊನೆ ಕ್ಷಣದಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತದಿಂದ ಯಾವುದೇ ಅಡ್ಡಿ ಇಲ್ಲದೆ ಎಲ್ಲವೂ ನಡೆದು ಸೂಸುತ್ರವಾಗಿ ಪಾದಯಾತ್ರೆ ಶುರುವಾಯಿತು.
ಮೇಕೆದಾಟು ಯೋಜನೆ ಜಾರಿಗೆ ಬಿಜೆಪಿ ಸರ್ಕಾರ ಹಿಂದೇಟು: ಸಿದ್ದರಾಮಯ್ಯ ಆರೋಪ
ಬೆಂಗಳೂರು: ಬಿಜೆಪಿ ಸರ್ಕಾರಕ್ಕೆ ಮೇಕೆದಾಟು ಯೋಜನೆ ಜಾರಿಯಾಗುವುದು ಬೇಕಿಲ್ಲ. ಅದಕ್ಕಾಗಿ ತಮಿಳುನಾಡಿನ ಜೊತೆ ಸೇರಿ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.
ಕನಕಪುರ ತಾಲ್ಲೂಕಿನ ಸಂಗಮದಿಂದ ಆರಂಭವಾದ ಕಾಂಗ್ರೆಸ್ ಪಾದಯಾತ್ರೆಯಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ 2017ರಲ್ಲಿ ಮೊದಲ ಬಾರಿಗೆ ಐದು ಸಾವಿರ ಕೋಟಿ ವೆಚ್ಚದ ವಿಸ್ತೃತ ಯೋಜನಾ ವರದಿ ತಯಾರಿಸಿ ಕೇಂದ್ರ ಜಲಶಕ್ತಿ ಅಯೋಗಕ್ಕೆ ಸಲ್ಲಿಸಲಾಗಿತ್ತು. ಕೇಂದ್ರ ಸರ್ಕಾರ ಕೆಲ ಸ್ಪಷ್ಟನೆಗಳನ್ನು ಕೇಳಿತ್ತು. 2019ರ ಜನವರಿಯಲ್ಲಿ ಎಲ್ಲ ಆಕ್ಷೇಪಣೆಗಳಿಗೆ ಉತ್ತರ ಕೊಟ್ಟು ಸುಮಾರು ಒಂಬತ್ತು ಸಾವಿರ ಕೋಟಿ ರೂ.ವೆಚ್ಚದ ಪರಿಷ್ಕೃತ ವರದಿಯನ್ನು ಸಲ್ಲಿಸಲಾಗಿದೆ. ನಮ್ಮ ಅವಧಿಯಲ್ಲಿ ಎಲ್ಲಿಯೂ ವಿಳಂಬವಾಗಿಲ್ಲ. ರಾಜ್ಯ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಜನರಿಗೆ ತಪ್ಪು ಮಾಹಿತಿ ನೀಡಿ ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ಕಾವೇರಿ ನೀರಿನ ವಿವಾದ ನ್ಯಾಯಾಧೀಕರಣ ಮತ್ತು ಸುಪ್ರೀಂಕೋರ್ಟ್ ನಲ್ಲಿ ಇತ್ಯರ್ಥವಾಗಿದೆ. ತಮಿಳುನಾಡಿನ ತಗಾದೆ ಹೊರತಾಗಿಯು ಸುಪ್ರೀಂಕೋರ್ಟ್ ಯಾವುದೇ ತಡೆಯಾಜ್ಞೆ ನೀಡಿಲ್ಲ ಎಂದರು.
ಮೇಕೆದಾಟು ನಮ್ಮ ಕೂಸು. ಬಿಜೆಪಿ ಸರ್ಕಾರ ಕೇಂದ್ರದ ಮೇಲೆ ಒತ್ತಡ ತಂದು ಅರಣ್ಯ ಇಲಾಖೆ ಅನುಮತಿ ಪಡೆದು ಅಣೆಕಟ್ಟು ನಿರ್ಮಾಣ ಕಾಮಗಾರಿ ಆರಂಭಿಸಲು ಎರಡು ವರ್ಷದಿಂದಲೂ ಡಬಲ್ ಇಂಜಿನ್ ಸರ್ಕಾರಕ್ಕೆ ಸಾಧ್ಯವಾಗಿಲ್ಲ. 25 ಮಂದಿ ಸಂಸದರನ್ನು ಇಟ್ಟುಕೊಂಡು ಒಂದು ಯೋಜನೆ ಆರಂಭಿಸಲಾಗದಿದ್ದಕ್ಕೆ ಬಿಜೆಪಿಯವರಿಗೆ ನಾಚಿಕೆಯಾಗಬೇಕು ಎಂದರು.
ಕಾವೇರಿ ನದಿ ಪಾತ್ರದಲ್ಲಿ ನಾಲ್ಕುಅಣೆಕಟ್ಟೆಗಳಿಂದ 114 ಟಿಎಂಸಿ ನೀರು ಸಂಗ್ರಹವಾಗುತ್ತಿದೆ. ಮಾರ್ಚ್, ಏಪ್ರಿಲ್, ಮೇನಲ್ಲಿ ನೀರು ಇರುವುದಿಲ್ಲ. ಆಗ ತಮಿಳುನಾಡಿಗೆ ನೀರು ಬಿಡಲು ಕಷ್ಟವಾಗುತ್ತದೆ. ನಮ್ಮ ಜನರಿಗೆ ನೀರು ಇರಲ್ಲ. ತಮಿಳುನಾಡಿಗೆ ಮೇಕೆದಾಟು ಅಣೆಕಟ್ಟೆಯಿಂದ ಅನುಕೂಲವಾಗಲಿದೆ. ಯೋಜನೆಯಿಂದ ನಾಶವಾಗುವ ಆರು ಸಾವಿರ ಎಕರೆ ಅರಣ್ಯ ಭೂಮಿಗೆ ಬದಲಾಗಿ ಹತ್ತು ಸಾವಿರ ಎಕರೆ ಭೂಮಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಯೋಜನೆಗೆ ವಿರೋಧ ವ್ಯಕ್ತ ಪಡಿಸಲು ತಮಿಳುನಾಡಿಗೆ ಯಾವುದೇ ಕಾರಣ ಇಲ್ಲ.ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ .ಅಣ್ಣಾಮಲೈ ಧರಣಿ ಕೂರುತ್ತಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸಿ.ಟಿ.ರವಿ ಬೆಂಬಲ ವ್ಯಕ್ತ ಪಡಿಸಿದ್ದಾರೆ. ರಾಜ್ಯದ ಬಿಜೆಪಿ ಸರ್ಕಾರ ತಮಿಳುನಾಡಿನ ಜೊತೆ ಕೈಜೊಡಿಸಿದೆ. ಇವರಿಗೆ ಯೋಜನೆ ಜಾರಿಯಾಗುವುದು ಬೇಕಿಲ್ಲ. ಅದಕ್ಕಾಗಿ ಕುಂಟು ನೆಪ ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.
ಪಾದಯಾತ್ರೆ ತಡೆಯಲು ಎಷ್ಟೇ ಪ್ರಯತ್ನ ಪಟ್ಟರು ನಮ್ಮ ಹೋರಾಟ ನಿಲ್ಲಲ್ಲ. ಪ್ರತಿದಿನ ಒಂದೊಂದು ಜಿಲ್ಲೆಯ ಜನ ಯಾತ್ರೆಯಲ್ಲಿ ಭಾಗವಹಿಸುತ್ತಾರೆ ಎಂದು ಹೇಳಿದರು.
ಈ ವೇಳೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಒಂಬತ್ತು ಸಾವಿರ ಕೋಟಿ ವೆಚ್ಚದ ಈ ಯೋಜನೆಯನ್ನು ಆರಂಭಿಸಲು ಕಾಂಗ್ರೆಸ್ ಸರ್ಕಾರ ಪ್ರಯತ್ನಿಸಿತ್ತು. 67 ಟಿಎಂಸಿ ನೀರು ಸಂಗ್ರಹಿಸುವ ಅಣೆಕಟ್ಟು ನಿರ್ಮಾಣಕ್ಕಾಗಿ ಪ್ರಬಲ ಹೋರಾಟ ನಡೆಸುವ ಛಲ ಎಲ್ಲಾ ಕಾಂಗ್ರೆಸ್ ನಾಯಕರಲ್ಲಿದೆ. ಇದನ್ನು ವಿಫಲಗೊಳಿಸಲು ಸರ್ಕಾರದ ಜೊತೆ ಸೇರಿ, ಬಿಜೆಪಿ, ಜೆಡಿಎಸ್ ಹಾಗೂ ಇತರ ಪಕ್ಷಗಳು ಪ್ರಯತ್ನಿಸುತ್ತಿವೆ. ಅದಕ್ಕೆ ನಾವು ವಿಚಲಿತರಾಗುವ ಅಗತ್ಯ ಇಲ್ಲ ಎಂದರು.
ಮೇಕೆದಾಟು ಯೋಜನೆಯಿಂದ ತಮಿಳುನಾಡು ಸೇರಿದಂತೆ ಯಾರಿಗೂ ತೊಂದರೆಯಾಗುವುದಿಲ್ಲ. ಯೋಜನೆಯಿಂದ ಬಾಧಿತವಾಗುವ ಅರಣ್ಯ ಪ್ರದೇಶದ ಎರಡು ಪಟ್ಟು ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಲು ಸರ್ಕಾರ ಗುರುತಿಸಿದೆ. ಯಾವ ಕಾರಣಕ್ಕೂ ಈ ಯೋಜನೆ ನಿಲ್ಲ ಬಾರದು ಎಂದರು.
ಜಲಸಂಪನ್ಮೂಲ ಇಲಾಖೆಯ ಮಾಜಿ ಸಚಿವ ಎಂ.ಬಿ.ಪಾಟೀಲ್
ಅನಾಮಧೇಯ ಜಾಹೀರಾತು ನೀಡಿ ಬಿಜೆಪಿ ಸರ್ಕಾರ ಜನರನ್ನು ದಾರಿ ತಪ್ಪಿಸುತ್ತಿದೆ. ವಾಸ್ತವಾಂಶಗಳನ್ನು ಮುಚ್ಚಿಡುತ್ತಿದೆ ಎಂದು ಜಲಸಂಪನ್ಮೂಲ ಇಲಾಖೆಯ ಮಾಜಿಸಚಿವ ಎಂ.ಬಿ.ಪಾಟೀಲ್ ಆರೋಪಿಸಿದರು.
ಪಾದಯಾತ್ರೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮೇಕೆದಾಟು ಯೋಜನೆ 1986-87 ಪ್ರಸ್ತಾಪವಾಗಿದೆ. 5600 ಎಕರೆಯಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಚಿಂತನೆ ನಡೆದಿತ್ತು. ಅಂದಿನಿಂದ 2013ವರೆಗೆ ಹಲವು ಬೆಳವಣಿಗೆಗಳಾಗಿವೆ.
ಕಾವೇರಿ ನೀರಾವರಿ ನ್ಯಾಯಮಂಡಳಿಯ ತೀರ್ಪಿನ ಬಳಿಕ ನಾನು 2013 ಅಕ್ಟೋಬರ್ ನಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಯೋಜನಾ ವರದಿ ತಯಾರಿಸಲು 4ಜಿ ರಿಯಾಯಿತಿ ನೀಡಲಾಯಿತು. ನಂತರ ಜಾಗತಿಕ ಆಸಕ್ತರನ್ನು ಆಹ್ವಾನಿಸಲಾಗಿತ್ತು. ಖಾಸಗಿ ಕಂಪೆನಿಗಳು 22 ಕೋಟಿ ಟೆಂಡರ್ ನಮೂದು ಮಾಡಿದ್ದವು. ಅದು ಹೆಚ್ಚಾಗಿದೆ ಎಂದು ಕೈ ಬಿಟ್ಟು 3.26 ಕೋಟಿ ರೂ. ವೆಚ್ಚದಲ್ಲಿ ರಾಜ್ಯ ಸರ್ಕಾರದ ಅಧಿಕಾರಿಗಳು ಯೋಜನೆಯ ವಿಸ್ತೃತ ಯೋಜನಾ ವರದಿ ಸಿದ್ದ ಪಡಿಸಿದರು.
ಅದನ್ನು ಕೇಂದ್ರ ಜಲ ಆಯೋಗಕ್ಕೆ ವರದಿ ರೂಪದಲ್ಲಿ ಸಲ್ಲಿಸಲಾಯಿತು. ಅದಕ್ಕೂ ಮುನ್ನಾ ಯೋಜನೆಯ ಔಚಿತ್ಯ ವರದಿಯನ್ನೂ ನೀಡಲಾಗಿದೆ. ಬಳಿಕ ನಮ್ಮ ಯೋಜನಾ ವರದಿಗೆ ಕೇಂದ್ರ ಸರ್ಕಾರ ಅಂಗೀಕಾರ ದೊರೆತಿದೆ. ಬಳಿಕ ಕಾವೇರಿ ನದಿ ವಿವಾದದ ತೀರ್ಪು ಪ್ರಕಟಗೊಂಡಿತ್ತು. ಹಿರಿಯ ವಕೀಲ ಪಾಲಿನಾರಿಮನ್ ಅವರು ಕೊನೆಯ ಹಂತದ ವಿಚಾರಣೆಯಲ್ಲಿ ಮಾಡಿದ ವಾದ ಪರಿಗಣಿಸಿ ತಮಿಳುನಾಡಿಗೆ ಹಂಚಿಕೆಯಾಗಿದ್ದ 193 ಟಿಎಂಸಿ ನೀರಿನ ಬದಲು ಸುಪ್ರೀಂಕೋರ್ಟ್ 172 ಟಿಎಂಸಿಯನ್ನು ಮರುಹಂಚಿಕೆ ಮಾಡಿದೆ ಎಂದು ವಿವರಿಸಿದರು.
ಮೇಕೆದಾಟು ಅಣೆಕಟ್ಟಿಗೆ ಮೊದಲು 5692 ಕೋಟಿ ರೂ ವೆಚ್ಚದಲ್ಲಿ ಯೋಜನೆ ತಯಾರಿಸಲಾಗಿತ್ತು. ಭೂಸ್ವಾಧೀನ ಪ್ರಕ್ರಿಯ ಮೌಲ್ಯ ಹೆಚ್ಚಾಗಿದ್ದರಿಂದ ಪರಿಷ್ಕೃತ ಯೋಜನಾ ವೆಚ್ಚ ಒಂಬತ್ತು ಕೋಟಿ ರೂ.ಗೆ ಹೆಚ್ಚಾಯಿತು ಎಂದು ವಿವರಿಸಿದರು.
ಕಾವೇರಿ ನೀರು ನಿರ್ವಹಣಾ ಮಂಡಲಿ ಮತ್ತು ಕೇಂದ್ರ ಪರಿಸರ ಅರಣ್ಯ ಇಲಾಖೆಯ ಅನುಮತಿ ಪಡೆದು ಯೋಜನೆ ಆರಂಭಿಸಲು ಸಾಧ್ಯವಿದೆ. ಈ ಎರಡು ಕೆಲಸಗಳು ಕೇಂದ್ರ ಸರ್ಕಾರದ ಅಧೀನದಲ್ಲಿ ನಡೆಯಬೇಕಿದೆ. ಬಿಜೆಪಿ ಸರ್ಕಾರ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಅನಾಮಧೇಯ ಜಾಹೀರಾತು ನೀಡಿದೆ. ನಾವು ವಾಸ್ತವಾಂಶಗಳನ್ನು ನೀಡಲು ಪ್ರತ್ಯೇಕ ಜಾಹೀರಾತು ನೀಡುತ್ತೇವೆ ಎಂದು ಹೇಳಿದರು