ಕಳೆದ 10 ವರ್ಷಗಳಲ್ಲಿ ನಡೆದ ಅತೀ ದೊಡ್ಡ ಅಕ್ರಮ ವಿಧ್ವಂಸ
ಇಸ್ರೇಲಿ ಸೇನೆಯು ತನ್ನ ನಿಯಂತ್ರಣವಿರುವ ವೆಸ್ಟ್ ಬ್ಯಾಂಕ್ ನ ಉತ್ತರ ಜೋರ್ಡನ್ ಕಣಿವೆಯಲ್ಲಿ ಒಂದು ಇಡೀ ಫೆಲೆಸ್ತೀನಿ ಗ್ರಾಮವನ್ನು ಧ್ವಂಸಗೊಳಿಸಿದೆ. ನವೆಂಬರ್ 5ರಂದು ಹಲವು ಮಾಧ್ಯಮಗಳು ಈ ಬಗ್ಗೆ ವರದಿಯನ್ನು ಮಾಡಿವೆ. ಇದು ಕಳೆದ 10 ವರ್ಷಗಳಲ್ಲಿ ನಿಯಂತ್ರಣವಿರುವ ಫೆಲೆಸ್ತೀನ್ ಪ್ರದೇಶಗಳಲ್ಲಿ ಇಸ್ರೇಲ್ ನಡೆಸಿದ ಅತೀ ದೊಡ್ಡ ಅಕ್ರಮ ವಿಧ್ವಂಸ ಎಂದು ಹೇಳಲಾಗಿದೆ. ಫೆಲೆಸ್ತೀನಿ ಬೆದುಯಿನ್ ಪಶುಪಾಲಕ-ರೈತ ಸಮುದಾಯದವರು ನೆಲೆಸಿರುವ ಖಿರ್ ಬತ್ ಹಮ್ಸಾ ಗ್ರಾಮದ ವಿಧ್ವಂಸದಿಂದ ಸುಮಾರು 80 ಫೆಲೆಸ್ತೀನಿಯರು ನಿರಾಶ್ರಿತರಾಗಿದ್ದು, ಇದರಲ್ಲಿ 41 ಮಕ್ಕಳೂ ಸೇರಿದ್ದಾರೆ.
ಸುದ್ದಿ ಮಾಧ್ಯಮಗಳ ಪ್ರಕಾರ, ಮಂಗಳವಾರ ತಡರಾತ್ರಿ ಬುಲ್ಡೋಝರ್ ಸಹಿತ ಆಗಮಿಸಿದ್ದ ಇಸ್ರೇಲಿ ಸೇನೆಯ ವಾಹನಗಳು ಏಕಾಏಕೀ ಗ್ರಾಮಕ್ಕೆ ನುಗ್ಗಿದ್ದವು. ಯಾವುದೇ ಮುನ್ಸೂಚನೆ ಇಲ್ಲದೆ ನಡೆಸಿದ ಕಾರ್ಯಾಚರಣೆಯಿಂದ ಗ್ರಾಮಸ್ಥರು ದಂಗಾಗಿದ್ದರು. 100ಕ್ಕೂ ಅಧಿಕ ಇಸ್ರೇಲಿ ಸೈನಿಕರು ಈ ವಿಧ್ವಂಸ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಈ ವೇಳೆ 30 ಟನ್ ಗಿಂತಲೂ ಅಧಿಕ ಪಶುವಿನ ಮೇವನ್ನೂ ನಾಶಪಡಿಸಲಾಗಿದೆ ಎಂದು ವರದಿಯಾಗಿದೆ.
ಸುಮಾರು 80 ಜನರಿರುವ 11 ಫೆಲೆಸ್ತೀನಿ ಕುಟುಂಬಗಳ ಚಿಂತಾಜನಕ ಪರಿಸ್ಥಿತಿಗೆ ಸಂಬಂಧಿಸಿ ಈಗಾಗಲೇ ಅಂತಾರಾಷ್ಟ್ರೀಯ ಮತ್ತು ರಾಷ್ಟ್ರಿಯ ಮಟ್ಟದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಈ ವಿಧ್ವಂಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆ ಮತ್ತು ಇಸ್ರೇಲ್ ನ ಮಾನವ ಹಕ್ಕು ಸಂಘಟನೆ ಬಿಟಿಸೆಲೆಮ್ ತೀವ್ರ ಕಳವಳ ವ್ಯಕ್ತಪಡಿಸಿವೆ. ‘’ಮಾರಕ ಕೊರೋನ ವೈರಸ್ ಪ್ರಕೋಪದ ಹೊರತಾಗಿಯೂ 2020ರಲ್ಲಿ ಇಸ್ರೇಲ್ ನ ವಿಧ್ವಂಸವು ಉಚ್ಛ್ರಾಯ ಮಟ್ಟದಲ್ಲಿದೆ. 2020ಕ್ಕೂ ಮೊದಲು 10 ತಿಂಗಳುಗಳಲ್ಲಿ ಸುಮಾರು 690 ಫೆಲೆಸ್ತೀನಿ ನೆಲೆಗಳನ್ನು ಇಸ್ರೇಲ್ ಧ್ವಂಸಗೊಳಿಸಿದ್ದು, ಇದರಿಂದ 404 ಮಕ್ಕಳು ಸಹಿತ 900 ಫೆಲೆಸ್ತೀನಿಯನ್ನರು ಬಹುತೇಕ ನಿರಾಶ್ರಿತರಾಗಿದ್ದಾರೆ” ಎಂದು ವಿಶ್ವಸಂಸ್ಥೆ ಹೇಳಿದೆ.